ಸನಾ: ಯೆಮನ್ (Yemen) ಪ್ರಜೆಯನ್ನು ಹತ್ಯೆಗೈದ ಪ್ರಕರಣದಲ್ಲಿ ಕೇರಳ (Kerala) ಮೂಲದ ನರ್ಸ್‌ಗೆ ಯೆಮನ್ ಸರ್ಕಾರ ಮರಣದಂಡನೆಗೆ ಅನುಮೋದನೆ ನೀಡಿದ್ದು, ಈ ಕುರಿತು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (India’s Ministry of External Affairs) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಅಗತ್ಯ ನೆರವು ನೀಡುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಡಿ.30ರಂದು ಸೋಮವಾರ ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಮರಣದಂಡನೆಗೆ ಅನುಮತಿಯನ್ನು ನೀಡಿದ ಬಳಿಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.ಇದನ್ನೂ ಓದಿ: BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್
ಕೇರಳ ಮೂಲದ ನಿಮಿಶಾ ಪ್ರಿಯಾ 2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿಯನ್ನು ಕೊಂದ ಹಿನ್ನೆಲೆ 2018ರಲ್ಲಿ ಆಕೆಯನ್ನು ಅಪರಾಧಿಯೆಂದು ಸಾಬೀತು ಮಾಡಲಾಗಿತ್ತು. ಬಳಿಕ 2020ರಲ್ಲಿ ಯೆಮನ್‌ನ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿ ಆದೇಶಿಸಿತ್ತು.
ಮರಣದಂಡನೆ ಆದೇಶಿಸಿದ ದಿನದಿಂದಲೂ ಆಕೆಯ ಕುಟುಂಬ ಬಿಡುಗಡೆಗಾಗಿ ಪರದಾಡುತ್ತಿದೆ. ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ 2024ರ ಆರಂಭದಲ್ಲಿ ಯೆಮನ್‌ನ ರಾಜಧಾನಿ ಸನಾಗೆ ಭೇಟಿ ನೀಡಿ, ಮರಣದಂಡನೆಯನ್ನು ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಸಂತ್ರಸ್ತರ ಕುಟುಂಬದೊಂದಿಗೆ ಹಣಕಾಸಿನ ಮಾತುಕತೆಯನ್ನು ನಡೆಸಿದ್ದರು.
ವರದಿಗಳ ಪ್ರಕಾರ ಒಂದು ತಿಂಗಳೊಳಗೆ ಮರಣದಂಡನೆ ಜಾರಿಯಾಗುವ ನಿರೀಕ್ಷೆಯಿದೆ. ಯೆಮನ್‌ನಲ್ಲಿ ನಿಮಿಷಾ ಪ್ರಿಯಾಗೆ ಶಿಕ್ಷೆ ನೀಡುವ ಬಗ್ಗೆ ನಮಗೆ ತಿಳಿದಿದೆ. ಉಳಿದಿರುವ ಪರ್ಯಾಯ ಆಯ್ಕೆಗಳ ಬಗ್ಗೆ ಅವರ ಕುಟುಂಬ ಯೋಚಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಘಟನೆ ಏನು?
ಕೇರಳದ (Kerala) ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ಆಗಿದ್ದ ನಿಮಿಷಾ ಪ್ರಿಯಾ 2008ರಲ್ಲಿ ಯೆಮನ್‌ಗೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ತನ್ನದೇ ಆದ ಸ್ವಂತ ಕ್ಲಿನಿಕ್ ತೆಗೆಯುವ ಆಸೆಯನ್ನು ಹೊಂದಿದ್ದರು. ಬಳಿಕ 2014ರಲ್ಲಿ ನಿಮಿಷಾ ಪ್ರಿಯಾಗೆ ತಲಾಲ್ ಅಬ್ದೋ ಮಹದಿ ಪರಿಚಯವಾಯಿತು. 2015ರಲ್ಲಿ ಮಹದಿಯ ಸಹಾಯದಿಂದ ಪ್ರಿಯಾ ಕ್ಲಿನಿಕ್ ಅನ್ನು ಸ್ಥಾಪಿಸಿದಳು.
2017ರಲ್ಲಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಯಿತು. ಈ ವೇಳೆ ಮಹದಿ ಆಕೆಗೆ ಚಿತ್ರಹಿಂಸೆ ನೀಡಿ, ಪಾಸ್‌ಪೋರ್ಟ್‌ನ್ನು ಕೂಡ ಕಿತ್ತುಕೊಂಡಿದ್ದ. ಇದರಿಂದಾಗಿ ಆಕೆಗೆ ತನ್ನ ತಾಯ್ನಾಡಿಗೆ ಮರಳಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತನ್ನ ಪಾಸ್‌ಪೋರ್ಟನ್ನು ಮರಳಿ ಪಡೆಯಲು ನಿದ್ದೆ ಭರಿಸುವ ಇಂಜೆಕ್ಷನ್ ಚುಚ್ಚಿದ್ದಳು. ಆದರೆ ಈ ಇಂಜೆಕ್ಷನ್ ಆತನ ಸಾವಿಗೆ ಕಾರಣವಾಯಿತು.ಇದನ್ನೂ ಓದಿ: ಹೊಟ್ಟೆ ನೋವು ತಾಳಲಾರದೆ ವ್ಯಕ್ತಿ ನೇಣಿಗೆ ಶರಣು