ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಐಎಎಸ್ ಅಧಿಕಾರಿ – ಅಪಘಾತದಲ್ಲಿ ಪತ್ರಕರ್ತ ಸಾವು

Public TV
1 Min Read
KERALA JOURNALIST

ತಿರುವನಂತಪುರ: ಕುಡಿದು ಕಾರು ಚಲಾಯಿಸಿದ ಐಎಎಸ್ ಅಧಿಕಾರಿ ಪತ್ರಕರ್ತನ ಸಾವಿಗೆ ಕಾರಣರಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಮೃತ ಪತ್ರಕರ್ತನನ್ನು ಕೆಎಂ ಬಷೀರ್ (35) ಎಂದು ಗುರುತಿಸಲಾಗಿದೆ. ಮಲಯಾಳಂ ಪತ್ರಿಕೆಯ ವರದಿಗಾರನಾಗಿ ಬಷೀರ್ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ನೀಡಿರುವ ಮಾಹಿತಿಯ ಅನ್ವಯ 2012ರ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಹಾಗೂ ಮಹಿಳೆಯೊಬ್ಬರು ಕಾರಿನಲ್ಲಿ ಇದ್ದರು ಎಂದು ತಿಳಿಸಿದ್ದಾರೆ. ರಾತ್ರಿ ಸುಮಾರು 1.35ರ ಸಮಯದಲ್ಲಿ ಅಪಘಾತ ನಡೆದಿದ್ದು, ವೇಗ, ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

KERALA JOURNALIST a

ಅಪಘಾತ ನಡೆದ ಕೂಡಲೇ ಸ್ಥಳೀಯರು ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಆ ವೇಳೆಗೆ ಆತ ಮೃತ ಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಐಎಎಸ್ ಅಧಿಕಾರಿ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿದು ಚಾಲನೆ ಮಾಡಿರುವ ಆರೋಪದ ಕಾರಣ ಅವರ ರಕ್ತದ ಮಾದರಿಗಳನ್ನು ಪರೀಕ್ಷೆ ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆಟೋ ಚಾಲಕ ಮಣಿಕಂಠನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅಪಘಾತ ವೇಳೆ ಐಎಎಸ್ ಅಧಿಕಾರಿ ಕುಡಿದ್ದರು ಎಂದು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಐಎಎಸ್ ಅಧಿಕಾರಿ ಅಮೆರಿಕದಿಂದ ವಾಪಸ್ ಆಗಿದ್ದರು. ಅವರನ್ನು ಆಗಸ್ಟ್ 1 ರಂದು ಸರ್ವೆ ಮತ್ತು ಭೂ ದಾಖಲೆ ನಿರ್ದೇಶಕರಾಗಿ ಸೇವೆ ಸೇರ್ಪಡೆಯಾಗಿದ್ದರು ಎಂಬ ಮಾಹಿತಿ ಲಭಿಸಿದೆ. 2012ರ ಐಎಎಸ್ ಬ್ಯಾಚ್‍ನಲ್ಲಿ ಇವರು 2ನೇ ರ್‍ಯಾಂಕ್ ಪಡೆದಿದ್ದರು.

ಪತ್ರಕರ್ತನ ಸಾವಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಪ್ರತಿಪಕ್ಷ ನಾಯಕರು ಸಂತಾಪ ಸೂಚಿಸಿದ್ದಾರೆ. ಕೇರಳ ಪತ್ರಕರ್ತರ ಸಂಘಟನೆ ಘಟನೆ ಕುರಿತು ಸಂಪೂರ್ಣ ತನಿಖೆಗೆ ಆಗ್ರಹಿಸಿದೆ.

KERALA JOURNALIST b

Share This Article
Leave a Comment

Leave a Reply

Your email address will not be published. Required fields are marked *