ತಿರುವನಂತಪುರಂ: ಕೇರಳದಲ್ಲಿ (Kerala) ನಡೆದ ನರಬಲಿ (Human Sacrifice) ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಬ್ಬರು ಮಹಿಳೆಯರನ್ನು (Women) ಪಾಪಿಗಳು ನರಬಲಿ ನೀಡಿರದೇ ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿ ಭಕ್ಷಿಸಿದ್ದಾರೆ (Cannibalism) ಎಂಬ ಆಘಾತಕಾರಿ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
ನರಬಲಿ ಪ್ರಕರಣದಲ್ಲಿ ಪೊಲೀಸರಿಗೆ ಮೊದಲ ಸುಳಿವು ನೀಡಿದ್ದು, ಕೇರಳದ ಪತ್ತನಂತಿಟ್ಟದ ಸಿಸಿಟಿವಿ (CCTV) ದೃಶ್ಯಾವಳಿ. ವೀಡಿಯೋ ತುಣುಕಿನಲ್ಲಿ ಬಲಿಯಾದ ಪದ್ಮಾ ಘಟನೆಗೂ ಮೊದಲು ಸ್ಕಾರ್ಪಿಯೋವನ್ನು ಏರಿ ಎಲ್ಲಿಗೋ ಹೊರಟಿರುವುದು ಕಂಡುಬಂದಿದೆ. ಆಕೆಯ ಜೊತೆಗೆ ಇದ್ದ ವ್ಯಕ್ತಿ ಘಟನೆಯ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ ಎಂಬುದು ತಿಳಿದುಬಂದಿದೆ.
ಈ ಪ್ರಕರಣದ ಆರೋಪಿಗಳನ್ನು ಜಾಡು ಹಿಡಿಯಲು ಪೊಲೀಸರು ಮೊದಲಿಗೆ ಪದ್ಮಾ ಅವರ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಬಳಿಕ ಆರೋಪಿಗಳ ನೆರೆಮನೆಯವರ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿ, ಆರೋಪಿಗಳನ್ನು ಹಿಡಿಯುವಲ್ಲಿ ಸಫಲರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಶೀಘ್ರವೇ ಶ್ರೀಮಂತರಾಗುತ್ತೀರಿ ಎಂದು ನಂಬಿಸಿದ ಶಾಫಿ, ದಂಪತಿಯಾದ ಭಗವಲ್ ಸಿಂಗ್ ಹಾಗೂ ಪತ್ನಿ ಲೈಲಾಗೆ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಅದರಂತೆಯೇ ದಂಪತಿ ಪದ್ಮಾ ಹಾಗೂ ರೋಸ್ಲಿನ್ ರನ್ನು ಬಲಿ ನೀಡಲು ಕೈಜೋಡಿಸಿದ್ದಾರೆ.
ವರದಿಗಳ ಪ್ರಕಾರ, ಪದ್ಮಾ ಸೆಪ್ಟೆಂಬರ್ 26ರಂದು ನಾಪತ್ತೆಯಾಗಿದ್ದರು. ಅಕ್ಟೋಬರ್ 9ರಂದು ಪೊಲೀಸರು ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ಜೋಸ್ ಥಾಮಸ್ ಎಂಬವರ ಮನೆಯಿಂದ ಪಡೆದಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ರಸ್ತೆ ಬದಿಯಲ್ಲಿ ಸ್ಕಾರ್ಪಿಯೋ ಕಾರು ಹಾಗೂ ಪದ್ಮಾ ಆರೋಪಿಗಳ ಮನೆಯೊಳಗೆ ಹೋಗುವುದು ಕಂಡುಬಂದಿದೆ.
ಈ ಎಲ್ಲಾ ಸಾಕ್ಷಿಗಳನ್ನು ಬಳಸಿ ಪೊಲೀಸರು ಆರೋಪಿ ದಂಪತಿಯ ಮನೆಯಲ್ಲಿ ಶೋಧ ನಡೆಸಿದಾಗ ಅಲ್ಲಿ ನಡೆದಿದ್ದ ಭಯಾನಕ ಸತ್ಯ ಹೊರ ಬಿದ್ದಿದೆ. ಆರೋಪಿಗಳು ಮಹಿಳೆಯರ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ಅವಶೇಷಗಳನ್ನು ತಮ್ಮದೇ ಮನೆಯ ತೋಟದಲ್ಲಿ 3 ಗುಂಡಿಗಳಲ್ಲಿ ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ
ಆರೋಪಿಗಳು ಪದ್ಮಾ ಅವರಿಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದು ಮಾತ್ರವಲ್ಲದೇ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿ ಹೂತಿದ್ದಾರೆ. ರೋಸ್ಲಿನ್‌ಗೂ ಚಿತ್ರಹಿಂಸೆ ನೀಡಿ, ಖಾಸಗಿ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು ತಿಳಿದುಬಂದಿದೆ. ವಿಚಾರಣೆ ವೇಳೆ ಕೊಲೆ ನಡೆಸಿರುವುದನ್ನು ಆರೋಪಿ ಭಗವಲ್ ಸಿಂಗ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಂತಕರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಫಿ ಈ ಹಿಂದೆ 75 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದ. 2020ರಲ್ಲಿ ಆತ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ. ಆತ ಇಂತಹ ಕ್ರೌರ್ಯಗಳನ್ನು ನಡೆಸುವಲ್ಲಿ ಆನಂದ ಪಡುತ್ತಿದ್ದ ಎನ್ನಲಾಗಿದ್ದು, ವಿಕೃತ ಮನಸ್ಥಿತಿಯ ವ್ಯಕ್ತಿ ಎಂದು ಪೊಲೀಸರು ಹೆಸರಿಸಿದ್ದಾರೆ. ಇದನ್ನೂ ಓದಿ: ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್