– ಆಸ್ಪತ್ರೆಗೆ ದಾಖಲಿಸುವಾಗ 24 ಕೆಜಿಗೆ ಇಳಿದಿದ್ದ ಶ್ರೀನಂದ!
ತಿರುವನಂತಪುರಂ: ತೂಕ ಹೆಚ್ಚಾಗೋ ಭಯದಲ್ಲಿದ್ದ ಕಳೆದ 5-6 ತಿಂಗಳಿನಿಂದ ಊಟ ಮಾಡದೇ ಕೇವಲ ನೀರು ಕುಡಿದು ಡಯಟ್ ಮಾಡುತ್ತಿದ್ದ ಯುವತಿ ಸಾವಿಗೀಡಾಗಿರುವ ಘಟನೆ ಕೇರಳದ (Kerala) ಕಣ್ಣೂರಿನ ಕೂತುಪರಂಬ ಎಂಬಲ್ಲಿ ನಡೆದಿದೆ.
ಮೃತ ಯುವತಿಯನ್ನು ಶ್ರೀನಂದ (18) (Sreenanda) ಎಂದು ಗುರುತಿಸಲಾಗಿದೆ. ಆಕೆ ತೂಕ ಹೆಚ್ಚಾಗುವ ಭಯದಿಂದ ಆಹಾರ ತ್ಯೆಜಿಸುವ ಗೀಳಾದ ʻಅನೋರೆಕ್ಸಿಯಾʼ (Anorexia) ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಈ ಖಾಯಿಲೆಯಿಂದ ಬಳಲುತ್ತಿರುವ ಜನ ತೆಳ್ಳಗಿನ ದೇಹವನ್ನು ಹೊಂದಿದ್ದರೂ ಸಹ ಅಧಿಕ ತೂಕ ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಇದರಿಂದ ಆಹಾರ ಸೇವಿಸುವುದನ್ನು ಬಿಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀನಂದ ಸುಮಾರು 5 ರಿಂದ 6 ತಿಂಗಳುಗಳಿಂದ ಈ ಸ್ಥಿತಿಯಿಂದ ಬಳಲುತ್ತಿದ್ದಳು. ಕೆಲವು ತಿಂಗಳುಗಳಿಂದ ಏನನ್ನೂ ತಿನ್ನುತ್ತಿರಲಿಲ್ಲ. ಈ ವಿಚಾರವನ್ನು ಅವರ ಕುಟುಂಬ ಸದಸ್ಯರಿಂದ ಆಕೆ ಮುಚ್ಚಿಟ್ಟಿದ್ದಳು. ಸುಮಾರು ಐದು ತಿಂಗಳ ಹಿಂದೆ, ಯುವತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ವೈದ್ಯರು ಆಕೆಗೆ ಊಟ ಮಾಡಬೇಕು ಎಂದು ಸಲಹೆ ಕೊಟ್ಟಿದ್ದರು. ಅಲ್ಲದೇ ಮನೋವೈದ್ಯರ ಸಲಹೆ ಪಡೆಯುವಂತೆ ಸೂಚಿಸಿದ್ದರು. ಇನ್ನೂ ಹಲವು ದಿನಗಳಿಂದ ಯುವತಿ ಕೇವಲ ಬಿಸಿ ನೀರನ್ನು ಮಾತ್ರ ಕುಡಿಯುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ಯುವತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ, ಸೋಡಿಯಂ ಕಡಿಮೆಯಾಯಿತು. ಜೊತೆಗೆ ಉಸಿರಾಟದ ಸಮಸ್ಯೆಯೂ ಇತ್ತು. ಆಗ ತಲಶ್ಶೇರಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗ ಆಕೆಯ ತೂಕ ಕೇವಲ 24ಕ್ಕೆ ಇಳಿದಿತ್ತು. ವೆಂಟಿಲೇಟರ್ ಸಹಾಯದಲ್ಲಿ ಇರಿಸಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಅನೋರೆಕ್ಸಿಯಾ ನರ್ವೋಸಾ?
ಅನೋರೆಕ್ಸಿಯಾ ಕಾಯಿಲೆ ಬಗ್ಗೆ ತಲಶ್ಶೇರಿ ಸಹಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಪ್ರಭು ಮಾಹಿತಿ ನೀಡಿದ್ದು, ಇದು ಸಂಪೂರ್ಣವಾಗಿ ಆಹಾರದ ಬಗೆಗಿನ ಅಸ್ವಸ್ಥತೆಯಲ್ಲ. ಇದು ಮಾನಸಿಕ ಸ್ಥಿತಿಯೂ ಆಗಿದೆ. ಈ ಕಾಯಿಲೆಯಿಂದ ಬಳಲುವವರು ತೂಕ ಜಾಸ್ತಿ ಹೊಂದಿದ್ದೇವೆ ಎಂಬ ಭ್ರಮೆಯಲ್ಲಿರುತ್ತಾರೆ. ಅಥವಾ ತೂಕ ಜಾಸ್ತಿಯಾಗುತ್ತದೆ ಎಂಬ ಭಯದಲ್ಲಿ ಆಹಾರವನ್ನು ತ್ಯೆಜಿಸುತ್ತಾರೆ. ಇದರಿಂದ ಕ್ರಮೇಣ ತಮ್ಮ ಹಸಿವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಅನೋರೆಕ್ಸಿಯಾ ನರ್ವೋಸಾ ರೋಗಕ್ಕೆ ಕಾರಣಗಳು ತಿಳಿದಿಲ್ಲ. ಇದು ಮಾನಸಿಕ ಆರೋಗ್ಯ, ಆನುವಂಶಿಕ ಬದಲಾವಣೆಗಳು ಮತ್ತು ಪರಿಸರದ ಅಂಶಗಳಿಂದ ಈ ಕಾಯಿಲೆ ಬರಬಹುದು. ಇದು ಎಲ್ಲಾ ಲಿಂಗ, ಜನಾಂಗಗಳು, ವಯಸ್ಸು ಮತ್ತು ದೇಹ ಪ್ರಕಾರಗಳ ಮೇಲೂ ಪರಿಣಾಮ ಬೀರಬಹುದು ಎಂದಿದ್ದಾರೆ.
ಈ ಕಾಯಿಲೆಯಿಂದ ಬಳಲುವವರಿಗೆ ಮಾನಸಿಕ ಚಿಕಿತ್ಸೆ, ಔಷಧಿಗಳು, ಪೌಷ್ಟಿಕಾಂಶ ಸಮಾಲೋಚನೆ, ವಾರಕ್ಕೊಮ್ಮೆ ಸಮಾಲೋಚನೆ ಮತ್ತು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಚೇತರಿಕೆ ಸಾಧ್ಯ. ಆದಾಗ್ಯೂ, ಅಂತಹ ಅಸ್ವಸ್ಥತೆಗಳು ರಾತ್ರೋರಾತ್ರಿ ಗುಣವಾಗುವುದಿಲ್ಲ. ಒಬ್ಬ ವ್ಯಕ್ತಿಯು ಅನುಭವಿಸಿದ ತೀವ್ರತೆ ಮತ್ತು ಅವಧಿಯನ್ನು ಅವಲಂಬಿಸಿ, ಚೇತರಿಕೆಗೆ ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.