ಪ್ಲಾಸ್ಟಿಕ್ ನಿಷೇಧಿಸಲು ವಿಶ್ವದಲ್ಲೇ ಕಠಿಣ ಕಾನೂನು ರೂಪಿಸಿದ ಕೀನ್ಯಾ: ಜೈಲು ಶಿಕ್ಷೆ, ದಂಡ ಎಷ್ಟು ಗೊತ್ತಾ?

Public TV
2 Min Read
plastic

ನೈರೋಬಿ: ಭಾರತದಲ್ಲಿ ಪ್ಲಾಸ್ಟಿಕ್ ನಿಷೇಧವಾಗಿದ್ದರೂ ಇದರ ಬಳಕೆ ಮಾತ್ರ ನಿಂತಿಲ್ಲ. ಆಗಾಗ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಆಫ್ರಿಕಾ ಖಂಡದಲ್ಲಿರುವ ಕೀನ್ಯಾ ದೇಶ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನು ಜಾರಿಗೆ ತಂದಿದೆ.

ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಯಾರಾದರೂ ಬಳಸಿದರೆ ಅವರಿಗೆ ನಾಲ್ಕು ವರ್ಷ ಕಠಿಣ ಜೈಲು ಶಿಕ್ಷೆ ಅಥವಾ 40 ಸಾವಿರ ಡಾಲರ್ (ಅಂದಾಜು 25.60 ಲಕ್ಷ ರೂ.) ದಂಡ ವಿಧಿಸುವ ಹೊಸ ಕಾನೂನನ್ನು ಕೀನ್ಯಾ ಸರ್ಕಾರ ಸೋಮವಾರದಿಂದಲೇ ಜಾರಿಗೆ ತಂದಿದೆ. ಇದು ಪ್ಲಾಸ್ಟಿಕ್ ತಡೆಗಟ್ಟಲು ದೇಶವೊಂದು ಜಾರಿಗೆ ತಂದಿರುವ ವಿಶ್ವದ ಕಠಿಣ ಕಾನೂನು ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.

ಕೀನ್ಯಾದ ಹೊಸ ಕಾನೂನು ಹೇಗಿದೆ ಎಂದರೆ ನೇರವಾಗಿ ಪೊಲೀಸರು ಯಾವುದೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬಹುದು, ಪ್ಲಾಸ್ಟಿಕ್ ಜನರ ಕೈಯಲ್ಲಿ ಇದ್ದರೂ ದಂಡ ಹಾಕಬಹುದಾಗಿದೆ.

ಸಮುದ್ರದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಜಲಚರಗಳ ಆಹಾರಕ್ಕೆ ಕಷ್ಟವಾಗುತ್ತಿದೆ. ಡಾಲ್ಫಿನ್ ಮತ್ತು ತಿಮಿಂಗಿಲಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‍ಗಳು ಸೇರಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ಕಾನೂನು ಜಾರಿಗೆ ತರಲಾಗಿದೆ.

“ಇದೇ ರೀತಿ ಮುಂದುವರೆದರೆ 2050ರ ವೇಳೆಗೆ ನಾವು ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಗಳನ್ನು ನೋಡಬಹುದು. ಪ್ಲಾಸ್ಟಿಕ್ ಬಳಕೆಗೆ ಈಗಲೇ ನಾವು ನಿರ್ಬಂಧ ಹೇರದಿದ್ದರೆ, ಭವಿಷ್ಯದಲ್ಲಿ ಮಾನವನ ಆಹಾರಕ್ಕೆ ಸಮಸ್ಯೆ ಆಗಬಹುದು” ಎಂದು ಕೀನ್ಯಾದ ಸಮುದ್ರ ಕಸದ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಬೀಬ್ ಉಲ್ ಹಬ್ರ್ ತಿಳಿಸಿದ್ದಾರೆ.

ಕೀನ್ಯಾ ತಯಾರಕ ಸಂಘದ ವಕ್ತಾರರು ಪ್ರತಿಕ್ರಿಯಿಸಿ, ಸರ್ಕಾರದ ಹೊಸ ಕಾನೂನಿನಿಂದ 60 ಸಾವಿರ ಮಂದಿಯ ಉದ್ಯೋಗಕ್ಕೆ ಹೊಡೆತ ಬೀಳುತ್ತದೆ ಅಷ್ಟೇ ಅಲ್ಲದೇ 176 ಉತ್ಪಾದನಾ ಘಟಕಗಳನ್ನು ಮುಚ್ಚಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾನೂನು ಹೇಗಿದೆ?
ಸರ್ಕಾರ 2016ರ ಮಾರ್ಚ್ 11ರಿಂದ ರಾಜ್ಯಾದ್ಯಂತ ಕೆಲ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಮಾರಾಟಗಾರರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿದರೆ 1986ರ ಪರಿಸರ ಸಂರಕ್ಷಣೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೇಸ್ ಹಾಕಬಹುದಾಗಿದೆ.

5 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ದಂಡ ಮತ್ತು 3 ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಪ್ಲಾಸ್ಟಿಕ್ ಬ್ಯಾಗ್, ಕ್ಯಾರಿಯರ್ ಬ್ಯಾಗ್, ಪೋಸ್ಟರ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಥರ್ಮಾಕೋಲ್ ಬಳಸುವುದನ್ನು ನಿಷೇಧಿಸಲಾಗಿದೆ.

 

Share This Article