– ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಭಿನ್ನ ಕಥಾನಕ
ಒಂದು ಕಡೆಯಿಂದ ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿರುವಾಗಲೇ, ಮತ್ತೊಂದು ದಿಕ್ಕಿನಲ್ಲಿ ಕಂಟೆಂಟ್‌ನ ಬಲದಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಬಲ್ಲ ಒಂದಷ್ಟು ಸಿನಿಮಾಗಳು ತಯಾರಾಗಿವೆ. ಹೊಸತನ, ಪ್ರಯೋಗಾತ್ಮಕ ಗುಣಗಳಿಂದಾಗಿ ಈ ಬಗೆಯ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಾಣುತ್ತಿದೆ. ಹೀಗೆಯೇ ಹೊಸ ಪ್ರಕಾರ, ಭಿನ್ನ ಕಥೆಯೊಂದಿಗೆ ರೆಡಿಯಾಗಿರುವ ಚಿತ್ರ ಚೌ ಚೌ ಬಾತ್. ಈಗಾಗಲೇ ಪ್ರೇಮ ಗೀಮ ಜಾನೆ ದೋ, ದೇವರು ಬೇಕಾಗಿದ್ದಾನೆ ಎಂಬ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಪ್ರತಿಭಾನ್ವಿತ ನಿರ್ದೇಶಕ ಕೆಂಜ ಚೇತನ್ ಕುಮಾರ್ ಈ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೀಗ `CHOW CHOW ಬಾತ್’ ತನ್ನೊಡಲಿನ ಹೊಸತನಗಳ ಮೂಲಕವೇ ಸದ್ದು ಮಾಡುತ್ತಿದೆ.
ಉಡುಪಿ (Udupi) ಮೂಲದವರಾದ ನಿರ್ದೇಶಕ ಕೆಂಜ ಚೇತನ್ ಕುಮಾರ್ (Kenja Chethan Kumar), ಬದುಕಿಗೂ ಆಸರೆಯಾಗಬೇಕು, ಸಿನಿಮಾಕ್ಕೂ ಪೂರಕವಾಗಿರಬೇಕೆಂಬ ಉದ್ದೇಶದಿಂದಲೇ ಆರಂಭಿಕವಾಗಿ ವೀಡಿಯೋ ಎಡಿಟಿಂಗ್ ಪಟ್ಟುಗಳನ್ನು ಕಲಿತುಕೊಂಡು ಕನ್ನಡದ ಪ್ರತಿಷ್ಟಿತ ಸುದ್ದಿ ವಾಹಿನಿಗಳಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಬಿಗ್ ಬಾಸ್ ಸೀಸನ್ 1ರಲ್ಲಿ ಕಾರ್ಯ ನಿರ್ವಹಿಸಿ, ವಾಹಿನಿಯ ಭಾಗವಾಗಿ ದುಡಿದಿದ್ದರು. ಬದುಕು ಕಂಫರ್ಟ್ ಜೋನಿನಲ್ಲಿದ್ದಾಗಲೇ ತನ್ನ ಕನಸಾದ ಸಿನಿಮಾ ನಿರ್ದೇಶನಕ್ಕಿಳಿದ ಅವರು ಈಗಾಗಲೇ ಎರಡು ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ. ಅವರ ಮೂರನೇ ಮಹಾ ಕನಸು `ಚೌ ಚೌ ಬಾತ್’. ಇದನ್ನೂ ಓದಿ: ನಿಮ್ಮ ಅಭಿನಯ- ವ್ಯಕ್ತಿತ್ವ ಎರಡು ಅದ್ಭುತ: ಅನುಪಮ್ ಖೇರ್ ಹೊಗಳಿದ ಶಿವಣ್ಣ
ಶೀರ್ಷಿಕೆ ಕೇಳಿದಾಕ್ಷಣವೇ ಇದು ಯಾವ ಜಾನರಿನ ಚಿತ್ರ ಕಥೆ ಯಾವ ಸ್ವರೂಪದ್ದು ಎಂಬಂಥಾ ಪ್ರಶ್ನೆಗಳು ಕಾಡುವುದು ಸಹಜ. ಈ ಬಗ್ಗೆ ಚಿತ್ರತಂಡ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಬಿಟ್ಟು ಕೊಡುತ್ತದೆ. ಆ ಪ್ರಕಾರವಾಗಿ ಹೇಳೋದಾದರೆ, ಇದೊಂದು ಪ್ರೇಮ ಕಥಾನಕ. ಹಾಗಂತ ಈ ಚಿತ್ರವನ್ನು ಸಿದ್ಧಸೂತ್ರಗಳ ಚೌಕಟ್ಟಿನಲ್ಲಿ ಬಂಧಿಸುವಂತಿಲ್ಲ. ಯಾಕೆಂದರೆ, ಹೊಸತನ ಮತ್ತು ಪ್ರಯೋಗಾತ್ಮಕ ಅಂಶಗಳೊಂದಿಗೆ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ ಎಂಬ ವಿಶೇಷ ಜಾನರ್‌ನ ಚಿತ್ರ ಈ ಚೌ ಚೌ ಬಾತ್. ತಮಿಳು ಸೇರಿದಂತೆ ಕೆಲವೇ ಕೆಲ ಸಿನಿಮಾಗಳು ಈ ಜಾನರ್‌ನಲ್ಲಿ ಮೂಡಿ ಬಂದಿವೆ. ಸಮ್ಮೋಹಕ ಗೆಲುವು ದಾಖಲಿಸಿವೆ. ಕನ್ನಡದ ಮಟ್ಟಿಗೆ ಹೇಳೋದಾದರೆ ಇದು ಆ ಜಾನರಿನ ಮೊದಲ ಚಿತ್ರ.
ಇಲ್ಲಿ ಮೂರು ಭಿನ್ನವಾದ ಲವ್ ಸ್ಟೋರಿಗಳಿವೆ. ಅದರಲ್ಲಿ ಮೂವರು ನಾಯಕರು ಮತ್ತು ಮೂವರು ನಾಯಕಿಯರಿರುತ್ತಾರೆ. ಆ ಕಥೆಗಳಿಗೆಲ್ಲ ಒಂದಕ್ಕೊಂದು ಸಂಬಂಧವಿರುತ್ತದೆ. ಅಲ್ಲಿ ಯಾರೂ ನಿರೀಕ್ಷಿಸದ ತಿರುವು, ರೋಮಾಂಚನಗೊಳಿಸುವ ಸರ್ಪ್ರೈಸ್‌ಗಳು ಮತ್ತು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳು ದಂಡಿಯಾಗಿ ಎದುರುಗೊಳ್ಳಲಿವೆ. ಈ ಚಿತ್ರದಲ್ಲಿ ಪ್ರಕರ್ಷ ಶಾಸ್ತ್ರಿ, ಸುಶ್ಮಿತಾ ಭಟ್, ಗೀತಾ ಬಂಗೇರ, ಸಾಗರ್ ಗೌಡ, ಧನುಷ್, ಸಂಕಲ್ಪ, ಅರುಣಾ ಬಾಲರಾಜ್ ಮುಂತಾದವರು ಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಹಾರಿಜಾನ್ ಮೂವೀಸ್ ಲಾಂಛನದಲ್ಲಿ ಚೌ ಚೌ ಬಾತ್ ನಿರ್ಮಾಣಗೊಂಡಿದೆ. ಸನಾತನೈ ಪಿಕ್ಚರ್ಸ್ ಸಂಸ್ಥೆ, ಓಂ ಸ್ಟುಡಿಯೋ, ಅವಿನಾಶ್ ಯು ಶೆಟ್ಟಿ, ಸತೀಶ್ ಎಸ್.ಬಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದೆ. ರುದ್ರಮುನಿ ಬೆಳೆಗೆರೆ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಸಾಹಿತ್ಯ ಈ ಚಿತ್ರಕ್ಕಿದೆ. ಕಥೆ ಚಿತ್ರಕಥೆ ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವ ಕೆಂಜ ಚೇತನ್ ಕುಮಾರ್ ಅವರೇ ಸಂಕಲನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈಗಿನ ಟ್ರೆಂಡ್‌ಗೆ ತಕ್ಕಂತೆ, ಪ್ರೇಕ್ಷಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡೇ ಕೆಂಜ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇಷ್ಟರಲ್ಲಿಯೇ ಈ ಸಿನಿಮಾದ ಟ್ರೈಲರ್ ಕೂಡಾ ಲಾಂಚ್ ಆಗಲಿದೆ. ಅದರ ಬೆನ್ನಲ್ಲಿಯೇ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.