– ಹಲವು ಟಾರ್ಗೆಟ್‍ಗಳ ಪಟ್ಟಿ ಸಿದ್ಧಪಡಿಸಲಾಗಿತ್ತು – ಇದರಲ್ಲಿ ನಿಖರ ಟಾರ್ಗೆಟ್ ಲಿಸ್ಟ್ ದೋವಲ್‍ಗೆ ಮಾತ್ರ ಗೊತ್ತಿತ್ತು
-ಮೊದಲ ಹಂತದಲ್ಲಿ ಉಗ್ರರು, ಉಗ್ರ ಕೇಂದ್ರಗಳು ಟಾರ್ಗೆಟ್
– 2ನೇ ಹಂತದಲ್ಲಿ ಪಾಕಿಸ್ತಾನ ಆರ್ಮಿ ಇನ್‍ಸ್ಟಾಲೇಷನ್‍ಗಳ ಗುರಿ
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್ (Pakistan) ಉಗ್ರರು ಹಾಗೂ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರದ (Operation Sindoor) ಹಿಂದಿನ ಟಾಪ್ ಸೀಕ್ರೆಟ್‌ಗಳು ಗೊತ್ತಿದ್ದಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಒಬ್ಬರಿಗೆ ಮಾತ್ರ ಎಂಬ ವಿಚಾರ ಬಹಿರಂಗವಾಗಿದೆ.
ಉಗ್ರರನ್ನು ಸೆದೆಬಡಿಯಲು ಹಲವು ಟಾರ್ಗೆಟ್‍ಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಇದರಲ್ಲಿ ನಿಖರ ಟಾರ್ಗೆಟ್ ಲಿಸ್ಟ್ ದೋವಲ್ ಅವರಿಗೆ ಮಾತ್ರ ಗೊತ್ತಿತ್ತು. ಅವರು ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುವುದಲ್ಲದೆ, ಉಗ್ರರ ಹತ್ಯೆ, ಕಾರ್ಯತಂತ್ರದ ಗೌಪ್ಯತೆಯ ನಿರ್ವಹಣೆಯನ್ನು ಮಾಡಿದ್ದರು. ಕಾರ್ಯಾಚರಣೆಗೆ ಕೇವಲ ಎರಡು ಗಂಟೆಗಳ ಮೊದಲು ಈ ಪಟ್ಟಿಗಳನ್ನು ಸೇನೆಯ ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿತ್ತು ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ.
ಎರಡು ಹಂತದ ದಾಳಿಗೆ ಸಿದ್ಧತೆ ನಡೆಸಿದ್ದ ಭಾರತ!
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಚಕ್ರವ್ಯೂಹವನ್ನು ಎರಡು-ಹಂತದಲ್ಲಿ ರಚಿಸಲಾಗಿತ್ತು. ಮೊದಲ ಹಂತದಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್‌ನಾದ್ಯಂತ ಇರುವ ಲಷ್ಕರ್-ಎ-ತೈಬಾ (LeT) ಮತ್ತು ಜೈಶ್-ಎ-ಮೊಹಮ್ಮದ್ (JeM) ನಂತಹ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಉಗ್ರರ ನೆಲೆಗಳು, ಅಡಗು ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಘಟಕಗಳನ್ನು ಹೊಡೆಯುವುದು ಉದ್ದೇಶವಾಗಿತ್ತು.
ಇನ್ನೂ 2ನೇ ಹಂತದಲ್ಲಿ ಪಾಕ್ ಸೇನೆಯ ಡ್ರೋನ್ ನೆಲೆಗಳು ಮತ್ತು ಸೇನಾ ನೆಲೆಗಳು ಸೇರಿದಂತೆ, ಸೇನೆಯ ಶಸ್ತ್ರಾಸ್ತ್ರ ಸಂಗ್ರಹಣ ಘಟಕಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಪಾಕಿಸ್ತಾನ ಸೇನೆ ನೇರವಾಗಿ ಪ್ರತಿಕ್ರಿಯಿಸಿದರೆ ಮಾತ್ರ ಈ ದಾಳಿ ನಡೆಸಲು ಯೋಜಿಸಲಾಗಿತ್ತು.
ರೆಡಾರ್ ಭ್ರಮೆಯಲ್ಲಿದ್ದ ಉಗ್ರರು!
ಪಾಕ್‌ನ ಬಹವಾಲ್ಪುರ್ ಮತ್ತು ಮುರಿಡ್ಕೆಯಂತಹ ಉಗ್ರ ನೆಲೆಗಳು ರೆಡಾರ್ ಕಣ್ಗಾವಲಿನಲ್ಲಿದ್ದವು. ಈ ಸ್ಥಳಗಳು ಉನ್ನತ ಶ್ರೇಣಿಯ ಭಯೋತ್ಪಾದಕ ನಾಯಕರ ಸಂಬಂಧ ಹೊಂದಿವೆ. ಇಲ್ಲಿಗೆ ಯಾರು ದಾಳಿ ನಡೆಸಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ಉಗ್ರರು ಮತ್ತು ಪಾಕಿಸ್ತಾನದ ಸೇನೆಗೆ ಇತ್ತು. ಇಬ್ಬರಿಗೂ ಸ್ಪಷ್ಟ ಸಂದೇಶವನ್ನು ಕಳುಹಿಸುವುದು ಆಪರೇಷನ್ ಸಿಂಧೂರದ ಉದ್ದೇಶವಾಗಿತ್ತು.
ಮೊದಲ ಹಂತದ ಆಪರೇಷನ್‍ನಲ್ಲೇ ಚೀನಾದಿಂದ ಪಾಕ್‍ಗೆ ಬೆಂಬಲ!
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ದಿನ ಪಾಕ್‌ಗೆ ಚೀನಾದ ಬೆಂಬಲ ಇರುವುದು ಗೊತ್ತಾಗಿದೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಚೀನಾ ತನ್ನ ಉಪಗ್ರಹ ವ್ಯಾಪ್ತಿಯನ್ನು ಭಾರತದ ಮೇಲೆ ಕೇಂದ್ರೀಕರಿಸಿ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ ಎಂಬುದು ತಿಳಿದು ಬಂದಿದೆ. ರಕ್ಷಣಾ ಸಚಿವಾಲಯ ಬೆಂಬಲಿತ ಜಂಟಿ ಯುದ್ಧ ಅಧ್ಯಯನ ಕೇಂದ್ರದ ಮಹಾನಿರ್ದೇಶಕ ಅಶೋಕ್ ಕುಮಾರ್ ಅವರ ಸಂಶೋಧನೆಗಳಿಂದ ಈ ಅಂಶಕ್ಕೆ ಮತ್ತಷ್ಟು ಸಾಕ್ಷಿ ಸಿಕ್ಕಂತಾಗಿದೆ.
ಭಾರತದ ಗುಪ್ತಚರ ಸಾಮರ್ಥ್ಯ
ಆಪರೇಷನ್ ಸಿಂಧೂರದ ವೇಳೆ ವಿಶೇಷವಾಗಿ ಪಿಒಕೆ ಮತ್ತು ಪಾಕಿಸ್ತಾನದ ಪಂಜಾಬ್‌ನೊಳಗಿನ ಸಕ್ರಿಯ ಉಗ್ರರ ಕೇಂದ್ರಗಳನ್ನು ಗುರುತಿಸಿ ದಾಳಿ ನಡೆಸಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ದಾಳಿ ನಡೆಸಲು ನೈಜ ಸಮಯದ ಮಾಹಿತಿಯನ್ನು ಸೇನೆಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆದಿದೆ. ಉಗ್ರರ ಅಡಗು ತಾಣಗಳನ್ನು ಗುರುತಿಸಲು ಇಸ್ರೋದ ನೆರವಿನಿಂದ ಉಪಗ್ರಹ ಆಧಾರಿತ ಚಿತ್ರಗಳನ್ನು ಸಹ ಬಳಸಲಾಗಿತ್ತು. ಇದು ದಾಳಿಯ ನಿಖರತೆ ಮತ್ತು ಮತ್ತು ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ಸಹಕಾರಿಯಾಗಿತ್ತು.
ಪಾಕ್‌ಗೆ ಖಡಕ್ ಸಂದೇಶ
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿರಿಸಿಕೊಂಡು ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದಾದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನದ ಸೇನೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಶೆಲ್ ದಾಳಿ ನಡೆಸಿತ್ತು. ಅಲ್ಲದೇ ಗಡಿಯುದ್ದಕ್ಕೂ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿತು. ಇದಾದ ಬಳಿಕ ರಾಡಾರ್ ವ್ಯವಸ್ಥೆಗಳು, ಸಂವಹನ ಕೇಂದ್ರಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು 11 ವಾಯುನೆಲೆಗಳ ಮೇಲೆ ವ್ಯಾಪಕ ದಾಳಿ ನಡೆಸುವ ಮೂಲಕ ಭಾರತ ಸೂಕ್ತ ಉತ್ತರ ನೀಡಿತ್ತು. ನಂತರ ಮೇ 10 ರಂದು, ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಉದ್ವಿಗ್ನತೆ ಕಡಿಮೆಯಾಗಿತ್ತು.