ಸಿಇಟಿ ಆನ್ಲೈನ್ ಅರ್ಜಿ ತುಂಬುವಾಗ ಆಗುವ ತಪ್ಪುಗಳ ನಿವಾರಣೆಗೆ ‘ವಿದ್ಯಾರ್ಥಿ ಮಿತ್ರ’
ಬೆಂಗಳೂರು: ಸಿಇಟಿಗೆ ಆನ್ಲೈನ್ ಅರ್ಜಿ (CET Online Form) ತುಂಬುವಾಗ ಅಭ್ಯರ್ಥಿಗಳು ಮಾಡುವ ದೋಷಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಇಟಿ ವಿದ್ಯಾರ್ಥಿಮಿತ್ರ ಎಂಬ ಮಾಸ್ಟರ್ ಟ್ರೈನರ್ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಡಿಸೆಂಬರ್ 28ರಂದು ಇಲ್ಲಿನ ಕೆಇಎ ಕಚೇರಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ 8 ಪದವಿಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕರಿಗೆ ಮಾಸ್ಟರ್ ತರಬೇತಿ ಕೊಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಇಟಿ ಅರ್ಜಿ ತುಂಬುವಾಗ ಹೆಸರಿನಲ್ಲಿ ವ್ಯತ್ಯಾಸ, ತಪ್ಪು ಆರ್.ಡಿ. ಸಂಖ್ಯೆ ನಮೂದಿಸುವುದು, ಪ್ರವರ್ಗ/ಜಾತಿ ಬರೆಯುವುದು ಸೇರಿದಂತೆ ಹಲವಾರು ತಪ್ಪುಗಳು ಅಭ್ಯರ್ಥಿಗಳಿಂದ ಆಗುತ್ತಿವೆ. ಹೀಗೆ ಪದೇ ಪದೇ ಆಗುವ ತಪ್ಪುಗಳನ್ನು ಗಮನಿಸಿ ಪರಿಣಾಮಕಾರಿ ಪರಿಹಾರ ನೀಡುವ ಸಲುವಾಗಿ ಮಾಸ್ಟರ್ ಟ್ರೈನರ್ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಕಲ್ಕಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲು
ಅರ್ಜಿ ಸಲ್ಲಿಸುವಾಗ ಮಾಡುವ ತಪ್ಪುಗಳಿಂದ ಸಿಇಟಿ ಪ್ರಕ್ರಿಯೆ ವಿಳಂಬವಾಗುವ ಜೊತೆಗೆ ಎಷ್ಟೋ ಸಲ ಅಭ್ಯರ್ಥಿಗಳಿಗೆ ಇಷ್ಟಪಟ್ಟ ಕೋರ್ಸು ಗಳಿಗೆ ಸೀಟು ಕೈತಪ್ಪುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ ಇಡೀ ಪ್ರಕ್ರಿಯೆಯಿಂದ ಹೊರಬೀಳುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶ ತರಬೇತಿ ವ್ಯವಸ್ಥೆಯ ಹಿಂದಿದೆ ಎಂದಿದ್ದಾರೆ.
ಮಾಸ್ಟರ್ ಟ್ರೈನರ್ ತರಬೇತಿ ಪಡೆದವರು ನಂತರ ತಂತಮ್ಮ ಜಿಲ್ಲೆಯಲ್ಲಿನ ಪ್ರತಿಯೊಂದು ವಿಜ್ಞಾನ ಕಾಲೇಜಿನ ಇಬ್ಬರು ಅಧ್ಯಾಪಕರಿಗೆ ತರಬೇತಿ ನೀಡಲಿದ್ದಾರೆ. ಒಟ್ಟಾರೆ, ಬರುವ ಜನವರಿ 10ರಿಂದ ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಆ ವೇಳೆಗೆ ಎಲ್ಲಾ ಕಾಲೇಜುಗಳಲ್ಲೂ ಈ ತರಬೇತಿ ಮುಗಿಸಲಾಗುವುದು ಎಂದು ಅವರು ಹೇಳಿದರು.
ಮಾಸ್ಟರ್ ಟ್ರೈನರ್ ಗಳಿಂದ ತರಬೇತಿ ಪಡೆದ ಉಪನ್ಯಾಸಕರು ಅಂತಿಮವಾಗಿ ತಮ್ಮ ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಗೆ ಅರ್ಜಿ ತುಂಬುವ ಬಗ್ಗೆ ತರಬೇತಿ ನೀಡಲಿದ್ದಾರೆ. ಮೂಲಸೌಕರ್ಯ ಇರುವ ಕಡೆ ಇದೇ ಉಪನ್ಯಾಸಕರು ಕಾಲೇಜುಗಳಲ್ಲೇ ಅರ್ಜಿ ತುಂಬಲು ವ್ಯವಸ್ಥೆ ಮಾಡಲಿದ್ದಾರೆ. ಈ ಮೂಲಕ ಅರ್ಜಿ ತುಂಬುವ ವೇಳೆ ಅನಗತ್ಯ ತಪ್ಪುಗಳಾಗುವುದನ್ನು ತಪ್ಪಿಸಬಹುದು ಎಂದು ಅವರು ವಿವರಿಸಿದರು. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಸಿಪಿಎಂ