ಬೆಂಗಳೂರು: ಕಾವೇರಿ ನನಗೊಬ್ಬನಿಗೆ ಸೇರಿದ್ದಲ್ಲ. 35 ತಾಲೂಕಿಗೆ ಸೇರಿದ್ದು. ಹೀಗಾಗಿ ನೀರು ಹಂಚಿಕೆ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಕಾವೇರಿ ಪ್ರಾಧಿಕಾರದ ಕುರಿತು ಚರ್ಚೆ ಆಗಬೇಕು. ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. ಕಾವೇರಿ ವ್ಯಾಜ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಸಂಸದರಿಗೆ ಮಾಹಿತಿ ನೀಡಲು ಪುಸ್ತಕವೊಂದನ್ನು ಹೊರತರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿರುವೆ ಎಂದು ಅವರು ಹೇಳಿದರು.
Advertisement
ಕಾವೇರಿ ವ್ಯಾಜ್ಯಕ್ಕೆ ಸಂಬಂಧಿಸಿದ ಮಾಹಿತಿ, ಚರ್ಚೆ ಮತ್ತು ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಹೇಳಿರುವೆ. ನಮ್ಮ ರಾಜ್ಯಕ್ಕೆ ಕಾವೇರಿ ನೀರು ಎಷ್ಟು ಉಳಿಸಲು ಸಾಧ್ಯವೋ ಅಷ್ಟು ಉಳಿಸಲು ನಾನು ಶ್ರಮಿಸುತ್ತೇನೆ ಎಂದು ಹೇಳಿದ ಅವರು, ಉಜಿರೆಯಲ್ಲಿ ಬಜೆಟ್ ಮತ್ತು ರೈತರ ಸಾಲ ಮನ್ನಾ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿ, ಅದೆಲ್ಲವನ್ನು ನಾನು ಈಗ ಮಾತನಾಡುವುದಿಲ್ಲ ಎಂದು ಸಿಟ್ಟು ವ್ಯಕ್ತಪಡಿಸಿದರು.