ಕಟೀಲು ಕ್ಷೇತ್ರದಲ್ಲಿ ಕೋಟಿ ಜಪ ಯಜ್ಞಕ್ಕೆ ಸಂಕಲ್ಪ – ಹರಿದು ಬಂದ ಜನ ಸಾಗರ

Public TV
2 Min Read
kateel temple koti japa 3

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2020ರ ಜನವರಿ 22 ರಿಂದ ಫೆಬ್ರವರಿ 3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಆಯೋಜನೆಗೊಂಡ ಕೋಟಿ ಜಪದ ಸಂಕಲ್ಪಕ್ಕೆ ಚಾಲನೆ ನೀಡಲಾಯಿತು.

ಸುಮಾರು ಆರು ಸಾವಿರ ಮಂದಿಗೆ ಒಂದು ಕೋಟಿ ಜಪ ಯಜ್ಞದ ಮಂತ್ರ ದೀಕ್ಷೆ ಸಂಕಲ್ಪ ಮಾಡಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಹರಿ ನಾರಾಯಣ ದಾಸ ಆಸ್ರಣ್ಣ ಪ್ರಸ್ತಾವನೆಗೈದು ದೇವಿಯ ಸಪ್ತತಿ ಪಾರಾಯಣದಲ್ಲಿ ಬರುವ 700 ಶ್ಲೋಕದಲ್ಲಿ ಈ ಮಂತ್ರ ದೀಕ್ಷೆಯ ಶ್ಲೋಕವು ವಿಶಿಷ್ಟವಾಗಿದ್ದು ಬಹು ಪ್ರಾಮುಖ್ಯ ಪಡೆದಿದ್ದು ಇದನ್ನು ಪಠಿಸಿದರೆ ಫಲ ಪ್ರಾಪ್ತಿ ಜಾಸ್ತಿ ಇದೆ ಎಂದರು.

kateel temple koti japa 2

ವೃತಧಾರಿಗಳು ಫೆಬ್ರವರಿ 2 ರಂದು ಕ್ಷೇತ್ರದಲ್ಲಿ ನಡೆಯುವ ಕೋಟಿ ಜಪಯಾಗದಲ್ಲಿ ಭಾಗವಹಿಸಬೇಕೆಂದು ವಿವರಣೆ ನೀಡಿದರು. ಕಡಂದಲೆ ಸ್ಕಂದಪ್ರಸಾದ ಭಟ್ ಮಂತ್ರ ದೀಕ್ಷೆಯ ವಿಧಿವಿಧಾನ ತಿಳಿಸಿ ಎರಡು ಸಲ 108 ಬಾರಿ ಮಂತ್ರ ಬೋಧಿಸಿದರು. ವೃತಧಾರಿಗಳಿಗೆ ದಾರ, ಮಂತ್ರಾಕ್ಷತೆ ಹಾಗೂ ಜಪದ ಲೆಕ್ಕ ಇಡುವ ಪತ್ರಕ ನೀಡಲಾಯಿತು. ಈಗಾಗಲೇ ಜಪ ಪಠಣ ವೃತಧಾರಿಗಳಾಗಿ ಇಪ್ಪತ್ತು ಸಾವಿರದಷ್ಟು ಮಂದಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಪಾದಯಾತ್ರೆಯಲ್ಲಿ ಆಗಮನ: ಕೋಟಿ ಜಪದ ಸಂಕಲ್ಪ ಯಜ್ಞದಲ್ಲಿ ಭಾಗಿಯಾಗಲು ಕಟೀಲು ಆಸುಪಾಸಿನ ಊರುಗಳಾದ ಎಕ್ಕಾರು ಹಾಗೂ ಕಿನ್ನಿಗೋಳಿಯ ಮೂರು ಕಾವೇರಿಯಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲೇ ಕಟೀಲು ಕ್ಷೇತ್ರಕ್ಕಾಗಮಿಸಿದರು.

kateel temple koti japa 1

ತಾಯಿಗೆ ಶರಣಾಗುವ: ಜಪದಿಂದ, ಪಾದಯಾತ್ರೆಯಿಂದ ಕಟೀಲಮ್ಮನಿಗೆ ಶರಣಾಗುವ ಮೂಲಕ ಧನ್ಯರಾಗೋಣ ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು. ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮೊಬೈಲಿಗೆ ಚಾರ್ಜ್ ಮಾಡಿದಂತೆ ನಮ್ಮ ಬದುಕಿಗೆ ಶಕ್ತಿ ತುಂಬಲು ದೇವರ ಉಪಾಸನೆ ಮುಖ್ಯ. ತಾಯಿ ದುರ್ಗೆಯ ಕುರಿತಾದ ಜಪದಿಂದ ನಮ್ಮ ಬದುಕು ಚೈತನ್ಯದಾಯಕವಾಗಲಿ ಎಂದು ಕಾಸರಗೋಡಿನ ಉಪ್ಪಳದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಮೂರು ಕಾವೇರಿಯಿಂದ ಹೊರಟ ಪಾದಯಾತ್ರೆಗೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

kateel temple koti japa 4

ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ, ಮೂಲ್ಕಿ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಕೆ.ಭುವನಾಭಿರಾಮ ಉಡುಪ, ಪ್ರಥ್ವಿರಾಜ ಆಚಾರ್ಯ, ಡಾ. ಗಣೇಶ್ ಅಮೀನ್ ಸಂಕಮಾರ್, ಕೃಷ್ಣ ಮಾರ್ಲ, ರಘುವೀರ ಕಾಮತ್, ಉಮೇಶ್ ಪಂಜ, ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *