ಕಾಸರಗೋಡು, ಕನ್ನಡ ಕುರಿತು ವಿಶ್ವಾದ್ಯಂತ ಜಾಗೃತಿ ಮೂಡಿಸಿದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ

Public TV
4 Min Read
kasaragodu kannada vikasa trust kannada campaign successfully ended

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ (ರಿ.) ಕಳೆದ ಒಂದು ವರ್ಷದಿಂದ ಕೆಲವೊಂದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ರಾಜ್ಯೋತ್ಸವದ ಅಂಗವಾಗಿ ಕಾಸರಗೋಡು ಮತ್ತು ಕನ್ನಡ ಭಾಷೆಗೆ ಸಂಬಂಧಪಟ್ಟ ವ್ಯಕ್ತಿಗಳ, ಸಂಘ-ಸಂಸ್ಥೆಗಳ, ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನವನ್ನು 1 ನವೆಂಬರ್ 2021 ರಿಂದ 14 ಜನವರಿ 2022 ರವರೆಗೆ ನಿರಂತರವಾಗಿ 75 ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿದೆ. ವಿಶ್ವದೆಲ್ಲೆಡೆಯ ಜನರನ್ನು ತಲುಪುದ ಉದ್ದೇಶದಿಂದ ತನ್ನ ವೆಬ್ ಸೈಟ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ನಡೆಸಿದೆ.

Kasaragod Kannada Vikasa Mahiti Abhiyana Day 34

ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ಅವರು 1 ನವೆಂಬರ್ 2021 ರಂದು ಪ್ರಥಮ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸುವ ಮೂಲಕ ಈ ಮಾಹಿತಿ ಅಭಿಯಾನವನ್ನು ಉದ್ಘಾಟಿಸಿದರು. ನಂತರದ ದಿನಗಳಲ್ಲಿ ಸಚಿವರುಗಳಾದ ಬಿ.ಸಿ. ನಾಗೇಶ್, ಹಾಲಪ್ಪ ಆಚಾರ್, ಶಶಿಕಲಾ ಜೊಲ್ಲೆ, ಗಣ್ಯರಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು, ಸಿ.ಟಿ. ರವಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಮುಂತಾದವರು ವಿವಿಧ ದಿನಗಳ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಕಾಸರಗೋಡು ಮತ್ತು ಕನ್ನಡ ಸಂಸ್ಕೃತಿ ಕುರಿತು ವಿವರಿಸುವ ಈ ಅಭಿಯಾನವನ್ನು ಶ್ಲಾಘಿಸಿದ್ದಾರೆ.

Kasaragod Kannada Vikasa Mahiti Abhiyana Day 75

ದಿನಗಳೆದಂತೆ ಈ ಅಭಿಯಾನವು ಕಾಸರಗೋಡಿನ ಕನ್ನಡಿಗರಲ್ಲಿ ವ್ಯಾಪಕ ಸ್ವೀಕಾರರ್ಹತೆ ಪಡೆಯಿತು ಮತ್ತು ಜನರು ತಮ್ಮ ಸಾಮಾಜಿಕ ಜಾಲತಾಣ, ವಾಟ್ಸಾಪ್ ಮೂಲಕ ದಿನವೂ ಮಾಹಿತಿ ಪತ್ರಗಳನ್ನು ಹಂಚಿಕೊಂಡು ಅಭಿಮಾನಪಟ್ಟರು. ಒಟ್ಟಿನಲ್ಲಿ ನಿರಂತರ 75 ದಿನಗಳ ಕಾಲ ನಡೆದ ಅಭಿಯಾನ ಕಾಸರಗೋಡಿನ ಕನ್ನಡಿಗರಲ್ಲಿ ಆತ್ಮಾಭಿಮಾನ ಹೆಚ್ಚಿಸುವಲ್ಲಿ ಹಾಗೂ ಕಾಸರಗೋಡು ಮತ್ತು ಕನ್ನಡ ಭಾಷೆಯ ಆಳವಾದ ಸಂಬಂಧ ಕುರಿತು ವಿಶ್ವದೆಲ್ಲೆಡೆಯ ಕನ್ನಡಿಗರ ಗಮನ ಸೆಳೆಯಲು ಯಶಸ್ವಿಯಾಯಿತು. ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವ ಹೇಗಿರುತ್ತೆ? – ಇಲ್ಲಿದೆ ಪೂರ್ಣ ವಿವರ

Kasaragod Kannada Vikasa Mahiti Abhiyana Day 67

ಅಭಿಯಾನದ ಸಮಾರೋಪ ದಿನ ಕ್ಲಬ್ ಹೌಸ್ ವೇದಿಕೆಯಲ್ಲಿ ನಡೆದ ಕಾಸರಗೋಡು ಕನ್ನಡಿಗರ ಕಥೆ-ವ್ಯಥೆ ಕಾರ್ಯಕ್ರಮ ಕಾಸರಗೋಡು ಕನ್ನಡಿಗರ ಹಿರಿಮೆ ಮತ್ತು ಸಮಸ್ಯೆಗಳನ್ನು ವಿಶ್ವದೆದುರು ತೆರೆದಿಡುವಲ್ಲಿ ಯಶಸ್ವಿಯಾಯಿತು. ಕಾರ್ಯರ್ಕಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಕಾಸರಗೋಡಿಗೆ ಹಿರಿಯ ಪತ್ರಕರ್ತರನ್ನು ಒಳಗೊಂಡ ನಿಯೋಗವನ್ನು ಕರೆದೊಕೊಂಡು ಹೋಗಿ ಅಲ್ಲಿಯ ವಾಸ್ತವಾಂಶಗಳನ್ನು ಅಧ್ಯಯನ ಮಾಡುವ ನಿರ್ಧಾರ ಪ್ರಕಟಿಸಿದರು. ಒಟ್ಟಿನಲ್ಲಿ ಮಾಹಿತಿ ಅಭಿಯಾನ ಮತ್ತು ಕ್ಲಬ್ ಹೌಸ್ ಕಾರ್ಯಕ್ರಮದಿಂದಾಗಿ ಕಾಸರಗೋಡು ಕನ್ನಡಿಗರಲ್ಲಿ ಹೊಸ ನಿರೀಕ್ಷೆ ಚಿಗುರೊಡೆದಿದೆ. ಇದನ್ನೂ ಓದಿ: ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ಪೋಸ್ಟರ್‌ ಬಿಡುಗಡೆ

Kasaragod Kannada Vikasa Mahiti Abhiyana Day 62

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನಕ್ಕೆ ಬಹಳಷ್ಟು ಜನ ಸ್ಪಂದಿಸಿದ್ದಾರೆ. ಹಲವು ವಿದ್ವಾಂಸರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದ್ದಾರೆ. ಅಭಿಯಾನ ಫಲಪ್ರದವಾಗಿದ್ದು ಇದರಲ್ಲಿ ಯಾವುದೇ ಸಂಶಯವಿಲ್ಲ.
-ಎಸ್.ವಿ.ಭಟ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ

Kasaragod Kannada Vikasa Mahiti Abhiyana Day 50

ಅಭಿಯಾನ ಜಾಗೃತಿ ಮೂಡಿಸುವಲ್ಲಿ ತುಂಬಾ ಯಶಸ್ವಿಯಾಗಿದೆ. ಕಾಸರಗೋಡಿನ ಅಸ್ವಿತ್ವ, ಪರಂಪರೆ, ವಿವಿಧ ಕ್ಷೇತ್ರಗಳಿಗೆ ಕೊಡುಗೆ ಈ ಎಲ್ಲ ವಿಷಯದ ಬಗ್ಗೆ ಅತಿಥಿಗಳು ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಜೀವಂತವಾಗಿರುವ ಕನ್ನಡ ಸಂಸ್ಕೃತಿ ಗಟ್ಟಿಯಾಗಿ ಬಲಪಡಿಸಬೇಕಿದ್ದು, ಮುಂದೆ ವಿದ್ಯಾರ್ಥಿಗಳು, ಯುವ ಜನಾಂಗಕ್ಕೆ ಅರಿವು ಮೂಡಿಸಬೇಕು ಎನ್ನುವಷ್ಟರ ಮಟ್ಟಿಗೆ ಅಭಿಯಾನ ಉತ್ತಮ ಕೆಲಸ ಮಾಡಿದೆ.
– ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಹಿರಿಯ ಸಾಹಿತಿಗಳು

Kasaragod Kannada Vikasa Mahiti Abhiyana Day 42

ಕಾಸರಗೋಡಿನ ಸಮಸ್ಯೆ ಉಂಟಾ ಎಂದು ಹಲವು ಮಂದಿ ಕೇಳುತ್ತಾರೆ. ಮಹಾಜನ್‌ ಆಯೋಗದ ವರದಿ ಸಂಸತ್ತಿಗೆ 1967ರಲ್ಲಿ ಸಲ್ಲಿಕೆಯಾಗಿದೆ. ಈ ವರದಿ ಇವತ್ತಿಗೂ ಸಂಸತ್ತಿನಲ್ಲಿ ಮಲಗಿದೆ. ಎಲ್ಲ ಪಕ್ಷಗಳ ಸದಸ್ಯರು ಸೇರಿದಂತೆ ಇವತ್ತಿನವರೆಗೂ ಸಂಸತ್‌ ಸದಸ್ಯರು ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಇಲ್ಲಿ ಮೂಲತ: ಸಮಸ್ಯೆ ಇರುವುದು ಸಂಸ್ಕೃತಿಯಲ್ಲಿ. ಇಲ್ಲಿ ತುಳು, ಹವ್ಯಕ, ಕೊಂಕಣಿ ಮಾತನಾಡುವವರು ಎಲ್ಲರೂ ಕನ್ನಡದ ಒಳಗಡೆ ಬಂದಿದ್ದಾರೆ. ಈ ಸಮಸ್ಯೆಯನ್ನು ದೊಡ್ಡ ಮಟ್ಟದಲ್ಲಿ ಎಲ್ಲರಿಗೂ ತಿಳಿಸಲು ಪೂರ್ವಗ್ರಹ ಇಲ್ಲದೇ ರವಿನಾರಾಯಣ ಅವರು ಈ ಕೆಲಸವನ್ನು ಮಾಡಿದ್ದಾರೆ. ಇದೊಂದು ಅಪೂರ್ವವಾದ ಪರಿಶ್ರಮ. ಇದು ಮೊದಲೇ ಆಗಬೇಕಿತ್ತು.
– ಡಾ. ರಮಾನಂದ ಬನಾರಿ, ಹಿರಿಯ ಸಾಹಿತಿಗಳು

Kasaragod Kannada Vikasa Mahiti Abhiyana Day 55

ಗಡಿಯಲ್ಲಿರುವ ಕಾರಣ ನಮ್ಮವರ ಹಲವು ಕೆಲಸಗಳು ದಕ್ಷಿಣ ಕನ್ನಡದವರ ಜೊತೆ ನಡೆಯುತ್ತದೆ. ಆದರೆ ಕೊರೊನಾ ಸಮಯದಲ್ಲಿ ಗಡಿ ಜಿಲ್ಲೆಯ ಜನರು ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದು ಉಳಿದವರಿಗೂ ಗೊತ್ತಾಗಿದೆ. ಈ ವಿಚಾರ ಅಲ್ಲದೇ ಹಲವು ವಿಷಯದ ಬಗ್ಗೆ ಉಳಿದ ಜನರಿಗೂ ನಮ್ಮ ಸಮಸ್ಯೆಗಳ ಪರಿಚಯವಾಗಿದೆ. ಡಿಜಿಟಲ್‌ ಮತ್ತು ಸಾಮಾಜಿಕ ಜಾಲತಾಣದ ಮೂಲಕ ವಿಕಾಸ ಟ್ರಸ್ಟ್‌ ಅಭಿಯಾನ ಬಹಳ ಉತ್ತಮ ಕೆಲಸ ಮಾಡಿದೆ. ಈ ಅಭಿಯಾನಕ್ಕೆ ಹಲವು ಕಡೆಯಿಂದ ಸಕಾರತ್ಮಕ ಸ್ಪಂದನೆ ಸಿಕ್ಕಿದೆ.
– ಸುರೇಶ ಕೃಷ್ಣ, ಮುಂಬೈನಲ್ಲಿ ವೃತ್ತಿಯಲ್ಲಿರುವ ಏತಡ್ಕ ನಿವಾಸಿ

ಬೆಂಗಳೂರಿನಂತೆ ಹಲವು ನಗರಗಳಲ್ಲಿ ಉದ್ಯೋಗಾರ್ಥ ನೆಲೆಸಿರುವ ಕಾಸರಗೋಡಿನ ಜನರು ತಮ್ಮ ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕು, ಅಲ್ಲಿಯ ಅಭಿವೃದ್ಧಿಗೆ ದನಿಯಾಗಬೇಕು ಎಂಬ ಉದ್ದೇಶದಿಂದ ವಿಕಾಸ ಟ್ರಸ್ಟ್ ಆರಂಭಿಸಲಾಗಿದೆ. ಈ ಮಾಹಿತಿ ಅಭಿಯಾನದ ಮೂಲಕ ಕಾಸರಗೋಡಿನ ಸಂಸ್ಕೃತಿ ಮತ್ತು ಕೊಡುಗೆಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಜನರಿಂದ ಲಭಿಸಿದ ಉತ್ತಮ ಪ್ರತಿಕ್ರಿಯೆ, ಇನ್ನಷ್ಟು ಉತ್ತಮ ಕೆಲಸ ಮಾಡಲು ನಮ್ಮ ಬಳಗಕ್ಕೆ ಉತ್ತೇಜನ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರನ್ನು ಸೇರಿಸಿ ಇನ್ನೂ ಹೆಚ್ಚಿನ ಕೆಲಸ ಸಮಾಜಮುಖಿ ಕಾರ್ಯಗಳನ್ನು ಮಾಡುವ ಆಲೋಚನೆ ಇದೆ.
– ರವಿನಾರಾಯಣ ಗುಣಾಜೆ, ಅಧ್ಯಕ್ಷ, ವಿಕಾಸ ಟ್ರಸ್ಟ್

Share This Article
Leave a Comment

Leave a Reply

Your email address will not be published. Required fields are marked *