ಹಾಡು ಹಾಡುವ ಅಪರೂಪದ ಹಂಪ್ ಬ್ಯಾಕ್ ತಿಮಿಂಗಿಲ ಮುರಡೇಶ್ವರದಲ್ಲಿ ಪತ್ತೆ

Public TV
2 Min Read
KWR FISH4

ಕಾರವಾರ: ವಿಶ್ವದಲ್ಲೇ ಅಪರೂಪ ಹಾಗೂ ಅಳವಿನಂಚಿನಲ್ಲಿರುವ ಹಂಪ್ ಬ್ಯಾಕ್ ವೇಲ್ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದೆ. ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುತಿದ್ದವರಿಗೆ ಈ ಬೃಹತ್ ತಿಮಿಂಗಿಲ ಕಾಣಿಸಿದ್ದು ಇದರ ವಿಡಿಯೋ ತುಣುಕುಗಳು ಪಬ್ಲಿಕ್ ಟಿವಿಗೆ ದೊರೆತಿದೆ.

ಮುರಡೇಶ್ವರದಿಂದ ಅರಬ್ಬಿ ಸಮುದ್ರದಲ್ಲಿ 20 ಕಿಲೋ ಮೀಟರ್ ಕ್ರಮಿಸಿದರೆ ನೇತ್ರಾಣಿ ನಡುಗಡ್ಡೆ ದ್ವೀಪ ಬರುತ್ತದೆ. ಈ ದ್ವೀಪದ ಸುತ್ತಮುತ್ತಲೂ ಮೂವತ್ತಕ್ಕೂ ಹೆಚ್ಚು ಪ್ರಬೇದದ ಮೀನುಗಳು, ಹವಳದ ದಿಬ್ಬಗಳು, ಸಮುದ್ರದ ಆಮೆಗಳ ಆವಾಸ ಸ್ಥಾನವಾಗಿದ್ದು ಭಾರತೀಯ ನೌಕಾದಳವು ಈ ದ್ವೀಪದಲ್ಲಿ ಸಮರಾಭ್ಯಾಸ ನಡೆಸುತ್ತದೆ. ಕಳೆದ ಮೂರು ವರ್ಷದ ಹಿಂದೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈ ಮಾಡಲು ಅವಕಾಶ ಮಾಡಿಕೊಟ್ಟಿದೆ.

KWR FISH2

ಅರಬ್ಬಿ ಸಮುದ್ರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈ ಮಾಡುತ್ತಿದ್ದ ವೇಳೆ ಸುಮಾರ್ 100 ಮೀಟರ್ ಆಳದಲ್ಲಿ ಹಂಪ್ ಬ್ಯಾಕ್ ಗಂಡು ತಿಮಿಂಗಿಲ ಪತ್ತೆಯಾಗಿದೆ. ಈ ವೇಳೆ ಈ ತಿಮಿಂಗಿಲದ ಬಾಲಕ್ಕೆ ಪೆಟ್ಟು ಬಿದ್ದಿದ್ದರಿಂದ ಈ ಬೃಹತ್ ತಿಮಿಂಗಿಲ ಈ ಭಾಗದಲ್ಲಿ ವಿಶಾಂತ್ರಿ ಸ್ಥಿತಿಯಲ್ಲಿತ್ತು.

ಈ ವೇಲ್‍ಗಳ ವಿಶೇಷತೆ ಏನು ಗೊತ್ತಾ?
ವಿಶ್ವದಲ್ಲೇ ಅಪರೂಪವಾದ ಈ ತಿಮಿಂಗಿಲವು ಅರಬ್ಬಿ ಸಮುದ್ರದಲ್ಲಿ ವಾಸಿಸುವ ಅತೀ ಅಪರೂಪದ ಸಮುದ್ರ ಸಸ್ತನಿ ಜೀವಿ. ಇಡೀ ವಿಶ್ವದಲ್ಲಿ ಇದರ ಸಂಖ್ಯೆ ನೂರು ಮಾತ್ರ. ಓಮಾನ್ ದೇಶದಿಂದ ಭಾರತದವರೆಗೆ, ಶ್ರೀಲಂಕದಿಂದ ಓಮಾನ್‍ವರೆಗೆ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತವೆ. ಜಗತ್ತಿನ ಅತೀ ದೊಡ್ಡ ತಿಮಿಂಗಿಲಗಳಲ್ಲಿ ಇದು ನಾಲ್ಕನೇ ಸ್ಥಾನ ಪಡೆದಿದೆ.

KWR FISH 1

ಈ ತಿಮಿಂಗಿಲಗಳಲ್ಲಿ ಗಂಡು ತಿಮಿಂಗಿಲ 15 ರಿಂದ 20 ನಿಮಿಷ ತನ್ನ ವಿಶಿಷ್ಟ ಧ್ವನಿಯಲ್ಲಿ ಮನುಷ್ಯರಂತೆ ಹಾಡು ಹೇಳುತ್ತದೆ. ಹೀಗಾಗಿಯೇ ಈ ತಿಮಿಂಗಿಲಗಳನ್ನು ಅದರ ಧ್ವನಿಯ ಮೂಲಕವೇ ಸಂಶೋಧಕರು ಗುರುತಿಸುತ್ತಾರೆ. ಇದು ಉಸಿರಾಟ ಮಾಡುವಾಗ ಅದರ ಮೂಗಿಂದ ಮೂರು ಮೀಟರ್ ಎತ್ತರ ನೀರು ಚಿಮ್ಮುತ್ತವೆ. ಸುಮಾರು 15 ಮೀಟರ್‍ನಿಂದ 18 ಮೀಟರ್ ಹೆಣ್ಣು ತಿಮಿಂಗಿಲ ಉದ್ದವಿದ್ದರೆ 13 ರಿಂದ 14 ಮೀಟರ್ ಉದ್ದ ಗಂಡು ತಿಮಿಂಗಿಲವಿರುತ್ತದೆ. ಸುಮಾರು 30 ಮೆಟ್ರಿಕ್ ಟನ್ ನಷ್ಟು ಭಾರವನ್ನು ಇದರ ದೇಹ ಹೊಂದಿದ್ದು ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತವೆ.

arabian sea

ಆಳ ಸಮುದ್ರದಲ್ಲಿ ಹೆಚ್ಚು ಓಡಾಡುವ ಈ ತಿಮಿಂಗಿಲಗಳು ಮುರಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದೆ. ಈ ಹಿಂದೆ 2017 ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಹೆಚ್ಚಾಗಿ ಕಾಣಿಸಿಕೊಳ್ಳದ ಇವು ಸಮುದ್ರದಾಳದಲ್ಲೇ ತನ್ನ ಜೀವಿತ ಅವಧಿಯನ್ನು ಕಳೆಯುವ ಜೊತೆಗೆ ಅರಬ್ಬಿ ಸಮುದ್ರದುದ್ದಕ್ಕೂ ವಲಸೆ ಹೋಗುತ್ತವೆ. ಹಲವು ಬಾರಿ ತನ್ನ ವಲಸೆ ಪ್ರವೃತ್ತಿಯಿಂದ ದೊಡ್ಡ ದೊಡ್ಡ ಹಡಗುಗಳಿಗೆ ಸಿಲುಕಿ ಗಾಯಗೊಂಡು ಸಾವನ್ನಪ್ಪುತ್ತವೆ. ಮನುಷ್ಯನ ದುರಾಸೆಗೆ ತಿಮಿಂಗಿಲಗಳ ಮಾಂಸಕ್ಕಾಗಿ ಇವುಗಳನ್ನು ಭೇಟೆ ಆಡುತ್ತಿದ್ದು ಇವುಗಳ ಸಂತತಿ ಕ್ಷೀಣವಾಗಲು ಮತ್ತೊಂದು ಕಾರಣವಾಗಿದೆ.

vlcsnap 2018 10 05 07h41m59s184 e1538705709298

ನೇತ್ರಾಣಿ ನಡುಗಡ್ಡೆಯಲ್ಲಿ ಈ ತಿಮಿಂಗಿಲಗಳು ಪತ್ತೆಯಾಗಿದ್ದು ಈ ವಿಷಯವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಮಾಹಿತಿ ರವಾನೆ ಮಾಡಲಾಗಿದೆ. ಇದಕ್ಕೆ ಕೇಂದ್ರ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದ್ದು ಇವುಗಳ ಸಂಶೋಧನೆಗಾಗಿ ನುರಿತ ತಜ್ಞರ ನೇಮಕ ಮಾಡಿದೆ. ಹೆಚ್ಚಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ 60:40 ಸಹಭಾಗಿತ್ವದಲ್ಲಿ 42 ಲಕ್ಷ ಹಣ ಮಂಜೂರು ಮಾಡಲಾಗಿದೆ. ಈ ವರೆಗೂ ಈ ತಿಮಿಂಗಿಲಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆದಿಲ್ಲ. ಈ ಕಾರಣದಿಂದ ಮುರಡೇಶ್ವರ ಭಾಗದಲ್ಲಿ ಇವು ಕಾಣಿಸಿದ್ದು ಹೆಚ್ಚಿನ ಸಂಶೋಧನೆಗೆ ಸಹಕಾರಿಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *