ಕಾರವಾರ: ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಮೋಸಮಾಡಿ ಹೋಗುವಾಗ ಚೂರಿ ಹಾಕಲಿಲ್ಲವಾ ಅದೇನು ಚೂರಿನೋ ಚಾಕುನೋ, ನೀವು ಮೋಸಮಾಡಿಲ್ಲವೇ ಎಂದು ಪ್ರಶ್ನಿಸಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಸಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ನಲ್ಲಿ ಉಪಮುಖ್ಯಮಂತ್ರಿಯಾಗಿದ್ದವರು. ಆದರೆ ಅವರು ಪಕ್ಷ ಬಿಟ್ಟು ಬಂದಿದ್ದರು. ದೇಶದಲ್ಲಿ ಪಕ್ಷಾಂತರ ಮಾಡಿದವನು ನಾನೊಬ್ಬನೇ ಅಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಅಷ್ಟೇ ಎಂದರು.
ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಅವರು ಮಾತನಾಡಿರುವ ಮತ್ತು ಉಪಯೋಗಿಸಿರುವ ಭಾಷೆ ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ. ನಾನು ಒಬ್ಬ ಸರ್ಕಾರದ ಭಾಗವಾಗಿ ಕ್ಷೇತ್ರಕ್ಕೆ ಹಣ ತಂದಿದ್ದೇನೆ. ಅವರ ಜೇಬಿನಿಂದ ಸಿದ್ದರಾಮಯ್ಯ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 13ನೇ ತಾರೀಕಿನ ನಂತರ ಯಾರು ಏನು ಕೊಟ್ಟಿದ್ದರು ಏನಾಯ್ತು ಎಂದು ಹೇಳುತ್ತೇನೆ ಎಂದು ತಿಳಿಸಿದರು.