– ಹಣ ಬಿಡುಗಡೆಯಾದ್ರೂ ಕಾಮಗಾರಿ ಪ್ರಾರಂಭಕ್ಕೆ ನೂರೆಂಟು ವಿಘ್ನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉದ್ದೇಶಿತ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆಗೆ ಸ್ಥಳೀಯ ಮೀನುಗಾರರ ವಿರೋಧದ ವ್ಯಕ್ತವಾಗಿದೆ. ಇದರಿಂದಾಗಿ ಕಾಮಗಾರಿಗೆ ಚಾಲನೆ ಸಿಗದೇ ಕಗ್ಗಂಟಾಗಿದೆ.
ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗದಿದ್ದರೆ ಅಭಿವೃದ್ಧಿಗಾಗಿ ಬಂದಿರುವ ಹಣ ವಾಪಸ್ ಕೇಂದ್ರಕ್ಕೆ ಹೋಗಲಿದ್ದು, ಬಂದರು ಇಲಾಖೆ ಈ ವಿಚಾರದಲ್ಲಿ ಇದೀಗ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಮಾಡಲು ಸಾಗರಮಾಲಾ ಯೋಜನೆ ಅಡಿ ಕೇಂದ್ರದಿಂದ ಈಗಾಗಲೇ 125 ಕೋಟಿ ರೂ. ಬಿಡುಗಡೆಯಾಗಿದೆ. 2017ರಲ್ಲಿಯೇ ಕೇಂದ್ರದಿಂದ ಹಣ ಬಿಡುಗಡೆಯಾಗಿದ್ದು, ಇನ್ನೂ ವಿಸ್ತರಣೆ ಕಾರ್ಯ ಪ್ರಾರಂಭ ಮಾಡಿಲ್ಲ. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು
Advertisement
Advertisement
ವಿಸ್ತರಣೆ ಸಂಬಂಧ ಯಾವುದೇ ವಿರೋಧ ವ್ಯಕ್ತವಾಗಬಾರದು ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಸಿ, ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆದು, ಇದೀಗ ತಡೆಗೋಡೆ ನಿರ್ಮಾಣ ಕಾರ್ಯ ಮಾಡಲು ಇಲಾಖೆ ಮುಂದಾಗಿದೆ. ಆದರೆ ಸ್ಥಳೀಯ ಮೀನುಗಾರರು ಮಾತ್ರ, ಯೋಜನೆಯಿಂದ ಮೀನುಗಾರಿಕೆ ಮೇಲೆ ಪರಿಣಾಮ ಬೀಳುತ್ತದೆ. ಯಾವುದೇ ಕಾರಣಕ್ಕೂ ಬಂದರು ವಿಸ್ತರಣೆ ಮಾಡಬಾರದು ಎಂದು ಪ್ರತಿಭಟನೆಗೆ ಇಳಿದಿದ್ದು ಕಾಮಗಾರಿ ನಡೆಸದಂತೆ ತಡೆ ಒಡ್ಡಿದ್ದಾರೆ.
Advertisement
ಮುಂಬೈ ಮೂಲದ ಡಿವಿಪಿ ಇನ್‍ಫ್ರಾ ಲಿಮಿಟೆಡ್ ಕಂಪನಿಗೆ ತಡೆಗೋಡೆ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಬಂದರು ಇಲಾಖೆ ನೀಡಿದೆ. ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯವರು ಸಹ ಕಡಲತೀರಕ್ಕೆ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭಿಸಲು ಸಾಮಗ್ರಿಗಳನ್ನು ತಂದು ಹಾಕಿಕೊಂಡಿದ್ದಾರೆ. ಆದರೆ ಮೀನುಗಾರರ ವಿರೋಧ ಹೆಚ್ಚಾಗಿದ್ದು, ಈಗಾಗಲೇ ಹಣ ಬಿಡುಗಡೆಯಾಗಿ ಎರಡು ವರ್ಷ ಆಗಿರುವುದರಿಂದ ಮತ್ತೆ ಕಾಮಗಾರಿ ತಡವಾದರೆ ಕೇಂದ್ರಕ್ಕೆ ಹಣ ಮರಳಿ ಹೋಗುವ ಸಾಧ್ಯತೆ ಬಹುತೇಕವಾಗಿದೆ. ಒಂದೊಮ್ಮೆ ಕೇಂದ್ರಕ್ಕೆ ಹಣ ವಾಪಸ್ ಹೋದರೆ ಬಂದರು ಇಲಾಖೆಗೆ ಕಪ್ಪು ಚುಕ್ಕೆ ಬೀಳಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
Advertisement
ಈ ನಿಟ್ಟಿನಲ್ಲಿ ಹೇಗಾದರೂ ಮಾಡಿ ಕಾಮಗಾರಿ ಪ್ರಾರಂಭಿಸಲೇ ಬೇಕು ಎಂದು ಅಧಿಕಾರಿಗಳು ನಿರಂತರ ಪ್ರಯತ್ನಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಸ್ಥಳೀಯ ಮೀನುಗಾರರನ್ನು ಸಹ ಎದುರು ಹಾಕಿಕೊಳ್ಳಲು ಇಚ್ಛೆ ಇಲ್ಲದೇ ಅವರ ಮನವೊಲಿಸುವ ಕಾರ್ಯಕ್ಕೂ ಇದೀಗ ಬಂದರು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಅಂತಿಮವಾಗಿ ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.