ಕಾರವಾರ: ಪಂಪನ ನಾಡು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ತಲಾ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡುವಂತೆ ತನ್ನ ಇಲಾಖೆಗೆ ಒಳಪಡುವ ಎ ಮತ್ತು ಬಿ ವರ್ಗದ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ.
ಮುಜರಾಯಿ ಇಲಾಖೆಯ ಈ ಸೂಚನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಉತ್ಸವ ನಡೆಸಲು ಭಕ್ತರ ಹಣವೇಕೇ ಎಂಬ ಮಾತುಗಳು ಕೇಳಿ ಬರುತ್ತಿದ್ದರೆ ಕೆಲವು ದೇವಸ್ಥಾನಗಳು ಈಗಾಗಲೇ ಒಂದು ಲಕ್ಷ ಮೊತ್ತದ ಚೆಕ್ ಗಳನ್ನು ನೀಡಿವೆ.
ಪ್ರತಿ ವರ್ಷ ಕದಂಬೋತ್ಸವ ಹಾಗೂ ಕರಾವಳಿ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಿಂದ ಹಾಗೂ ಖಾಸಗಿ ಉದ್ಯಮಿಗಳ ದೇಣಿಗೆ ಸಂಗ್ರಹಿಸಿ ಮಾಡಲಾಗುತಿತ್ತು. ಆದರೆ ಈ ಬಾರಿ ಕರಾವಳಿ ಉತ್ಸವಕ್ಕೆ ಅನುದಾನದ ಕೊರತೆ ಹಾಗೂ ಪ್ರವಾಹದ ತೊಂದರೆಯಿಂದಾಗಿ ರದ್ದು ಮಾಡಲಾಗಿದೆ.
ಕದಂಬೋತ್ಸವ ಕಾರ್ಯಕ್ರಮವನ್ನು ಮಾತ್ರ ಮಾಡಲು ಜಿಲ್ಲಾಡಳಿತ ಮುಂದೆ ಬಂದಿದ್ದು ಇದಕ್ಕಾಗಿ ಸರ್ಕಾರದಿಂದ ಅನುದಾನ ಬಂದಿದೆ. ಈ ಅನುದಾನವು ಸದ್ಯ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಲ್ಪದ್ದಾಗಿದೆ. ಉದ್ಯಮಿಗಳು ಹಾಗೂ ದಾನಿಗಳ ಸಹಕಾರ ಪಡೆಯಬಹುದಾಗಿತ್ತು. ಆದರೆ ಈ ಹಿಂದೆ ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರೇ ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ದೇಣಿಗೆ ಸಂಗ್ರಹ ಮಾಡುತ್ತಿದ್ದರು. ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವೆ ನೆಪ ಮಾತ್ರಕ್ಕೆ ಎಂಬಂತಾಗಿದ್ದು ಅವರಿಗು ಕೂಡ ಆಸಕ್ತಿ ಇಲ್ಲದಂತಾಗಿದೆ. ಹೀಗಾಗಿ ಕದಂಬೋತ್ಸವ ಕಾರ್ಯಕ್ರಮ ನಿಗದಿಯಾದರೂ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಣೆ ಮಾಡಲು ತಡವಾಗಿದ್ದು ಇನ್ನೂ ಘೋಷಣೆಯಾಗಿಲ್ಲ.
ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು ದೊಡ್ಡ ದೊಡ್ಡ ಕಲಾವಿದರನ್ನು ಕರೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಕೋಟಿ ಹಣದ ಖರ್ಚಾಗಲಿದೆ. ಎರಡು ದಿನ ಪಂಪನ ನಾಡಾದ ಬನವಾಸಿಯಲ್ಲಿ ಕದಂಬೋತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಸಹ ನೀಡಲಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ದೇಣಿಗೆ ಸಂಗ್ರಹ ಅನಿವಾರ್ಯವಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಉದ್ಯಮಿಗಳಾಗಲಿ, ರಾಜಕಾರಣಿಗಳಾಗಲಿ ದೇಣಿಗೆ ನೀಡಲು ಮುಂದಾಗದ ಕಾರಣ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ತನ್ನದೇ ಇಲಾಖೆಯ ಸುಪರ್ದಿಯಲ್ಲಿರುವ ಮುಜರಾಯಿ ದೇವಸ್ಥಾನದ ಹುಂಡಿಗೆ ಕೈಹಾಕಿದೆ. ಜನವರಿ 30ರಂದು ಮುಜರಾಯಿ ಇಲಾಖೆಯಿಂದ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೆ ನೋಟಿಸ್ ನೀಡಿದ್ದು ಹಲವರು ಹಣವನ್ನು ದೇಣಿಗೆ ರೂಪದಲ್ಲಿ ನೀಡಿದರೆ ಇನ್ನೂ ಕೆಲವು ದೇವಸ್ಥಾನದ ಕಮಿಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇದಕ್ಕೆ ಈ ಹಣ ಬಳಸಲಿ ಅದನ್ನು ಬಿಟ್ಟು ದೇವಸ್ಥಾನ ಹಣ ಮನೋರಂಜನೆಗೆ ಹೋಗುತ್ತಿರುವುದಕ್ಕೆ ಮುಜರಾಯಿ ದೇವಸ್ಥಾನದ ಹಲವು ಕಮಿಟಿಯವರು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಕೂಡ ನಾವು ಬಲವಂತವಾಗಿ ಆದೇಶಿಸಿಲ್ಲ, ಹಣದ ಕೊರತೆ ಇದೆ ದೇಣಿಗೆ ನೀಡಿ ಎಂದಷ್ಟೇ ಸೂಚನೆ ನೀಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಕಡ್ಡಾಯವಾಗಿ ನೀಡಲೇಬೇಕು ಎಂದು ಒತ್ತಡ ಕೇಳಿಬಂದಿದೆ ಎಂಬ ಆರೋಪ ಕೇಳಿಬಂದಿದ್ದು ಈಗ ವಿವಾದ ಉಂಟುಮಾಡಿದೆ.