Connect with us

Districts

ಕೋರ್ಟಿಗಾಗಿ ಜೋಯಿಡಾ ಬಂದ್ – ತಾಲೂಕಾಗಿ 40 ವರ್ಷವಾದ್ರೂ ನ್ಯಾಯಕ್ಕಾಗಿ ನ್ಯಾಯಾಲಯವೇ ಇಲ್ಲ

Published

on

ಕಾರವಾರ: ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ಜೋಯಿಡಾ ತಾಲೂಕನ್ನು ಬಂದ್ ಮಾಡಿ ಸ್ಥಳೀಯ ಜನ ಇಂದು ಪ್ರತಿಭಟನೆ ಮಾಡಿದರು. ಜೋಯಿಡಾ ನಗರದ ಶಿವಾಜಿ ಸರ್ಕಲ್ ಬಳಿ ಕಾಳಿ ಬ್ರಿಗೇಡ್ ಹಾಗೂ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಸೇರಿದ ಸ್ಥಳೀಯ ಜನರು ಜೋಯಿಡಾ ನಗರದಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಬಂದ್ ಕರೆ ಕೊಟ್ಟಿದ್ದರಿಂದಾಗಿ ಜೋಯಿಡಾ ನಗರದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಬಂದ್‍ಗೆ ಸಂಪೂರ್ಣ ಬೆಂಬಲ ದೊರೆಯಿತು. ಕಾಳಿ ಬ್ರಿಗೇಡ್ ನ ಸಂಚಾಲಕ ರವಿ ರೇಡ್ಕರ್, ವ್ಯಾಪಾರಿಗಳ ಸಂಘದ ಅಧ್ಯಕ್ಷ ರಫೀಕ್ ಕಾಜಿ, ಜಿ.ಪಂ ಸದಸ್ಯ ರಮೇಶ್ ನಾಯ್ಕ, ಗ್ರಾ.ಪಂ ಸದಸ್ಯರಾದ ವಿನಯ್ ದೇಸಾಯಿ, ವಕೀಲರಾದ ಸುನೀಲ್ ದೇಸಾಯಿ ಮುಂತಾದ ಪ್ರಮುಖ ನಾಯಕರು ಬಂದ್ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜೋಯಿಡಾ ತಾಲೂಕು ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕು ಆಗಿದೆ. ಆದರೇ ಜನಸಂಖ್ಯೆಯಲ್ಲಿ ವಿರಳ ಹೊಂದಿದ್ದು 120 ಕಂದಾಯ ಗ್ರಾಮಗಳಿವೆ. 1964 ರ ಮೈಸೂರು ಸಿವಿಲ್ ಕೋರ್ಟ್ ಕಾಯ್ದೆ ಜಾರಿಯಾಗಿದ್ದು ಇದರಂತೆ ಪ್ರತಿ ಕಂದಾಯ ತಾಲೂಕಿನ ವ್ಯಾಪ್ತಿಗೆ ಒಂದು ಸಿವಿಲ್ ನ್ಯಾಯಾಲಯ ಹಾಗೂ ಇತರೆ ವ್ಯಾಪ್ತಿಗೆ ತಕ್ಕಂತೆ ಇತರೆ ನ್ಯಾಯಾಲಯ ನಿರ್ಮಿಸಲು ಅವಕಾಶ ನೀಡಲಾಗಿದೆ. ನ್ಯಾಯಾಲಯ ಸ್ಥಾಪನೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯ ಜೋಯಿಡಾ ತಾಲೂಕಿನಲ್ಲಿ ಇರುವುದರಿಂದ ಜೋಯಿಡಾ ತಾಲೂಕಿನಲ್ಲಿ ಸಿವಿಲ್ ನ್ಯಾಯಾಲಯ ಸ್ಥಾಪನೆ ಆಗಬೇಕಿದೆ.

ಜೋಯಿಡಾ ತಾಲೂಕಾಗಿ 40 ವರ್ಷಗಳು ಕಳೆಯಿತು. ಆದರೆ ತಾಲೂಕಿಗೆ ಬೇಕಾದ ಅಗತ್ಯ ಇಲಾಖೆ ಕಚೇರಿಗಳು ತಾಲೂಕು ಕೇಂದ್ರಕ್ಕೆ ಬರದೇ ಪಕ್ಕದ ದಾಂಡೇಲಿಗೆ ಕಚೇರಿ ನೀಡಲಾಗಿತ್ತು. ಜೋಯಿಡಾ ತಾಲೂಕಿನಲ್ಲಿ ಜನ ಸಂಖ್ಯೆ ಕಮ್ಮಿ ಇರುವುದರಿಂದ ಜೋಯಿಡಾ ಬದಲು ಮೂವತ್ತು ವರ್ಷಗಳ ಹಿಂದೆ ದಾಂಡೇಲಿಗೆ ನ್ಯಾಯಾಲಯ ಕೊಡಲಾಯಿತು. ಆದರೇ ಈಗ ಜನಸಂಖ್ಯೆ ಹೆಚ್ಚಾಗಿದ್ದು ಕೇಸುಗಳ ಸಂಖ್ಯೆ ಹೆಚ್ಚಾಗಿವೆ. ಹಾಗಾಗಿ ಜೋಯಿಡಾ ತಾಲೂಕಿಗೆ ನ್ಯಾಯಾಲಯದ ಅವಶ್ಯಕತೆ ಇದ್ದು ದಾಂಡೇಲಿ ತಾಲೂಕಾಗಿ ಕಳೆದ ವರ್ಷ ಬಡ್ತಿ ಪಡೆದಿದೆ.

ಜೋಯಿಡಾ ತಾಲೂಕಾಗಿ 40 ವರ್ಷ ಕಳೆದರೂ ಈವರೆಗೂ ನ್ಯಾಯಾಲಯ ಸೇರಿದಂತೆ ಪ್ರಮುಖ ಇಲಾಖೆಯ ಕಚೇರಿಗಳು ಈಗ ಹೊಸದಾಗಿ ಆಗಿರುವ ದಾಂಡೇಲಿ ತಾಲೂಕಿನಲ್ಲಿದ್ದು ಇಲ್ಲಿನ ಜನರು ಸಮಸ್ಯೆ ಅನುಭವಿದುವಂತಾಗಿದೆ. ಈ ಕಾರಣದಿಂದ ಇಲ್ಲಿಯ ಜನರು ದಶಕದಿಂದ ನ್ಯಾಯಾಲಯದ ಬೇಡಿಕೆ ಮುಂದಿಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *