ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸೀಮಿತವಾಗಿರುವ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಕೇಂದ್ರ ಸರ್ಕಾರ ತನಗೆ ನೀಡದ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿ ನೀಡಲು ಜನಪದ ಕೋಗಿಲೆ ಸುಕ್ರಿ ಬೊಮ್ಮಗೌಡರವರು ನಿರ್ಧಾರ ಮಾಡಿದ್ದಾರೆ.
ಅಲ್ಲದೆ ತಮ್ಮ ಜನಾಂಗದ ಹಕ್ಕಿಗಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಕೂರುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿರುವ ಕಾಡನ್ನು ನಂಬಿ ಬದುಕು ಕಟ್ಟಿಕೊಂಡ ಹಾಲಕ್ಕಿ ಜನಾಂಗ ಈವರೆಗೂ ಸಂಕಷ್ಟದಲ್ಲಿದೆ. ನಮ್ಮಲ್ಲಿ ಶಿಕ್ಷಣ ಪಡೆದವರೇ ಕಮ್ಮಿ ಜನರಿದ್ದಾರೆ. ಅವರಿಗೆ ಉತ್ತಮ ಕೆಲಸ ಸಹ ಇಲ್ಲ. ಹೀಗಿರುವಾಗ ಕಳೆದ 20 ವರ್ಷದಿಂದ ನಮ್ಮ ಜನಾಂಗವನ್ನು ಪ.ಪಂಗಡಕ್ಕೆ ಸೇರಿಸಬೇಕು ಎಂಬ ಹೋರಾಟ ನಡೆಯುತ್ತಲೇ ಇದೆ ಎಂದರು. ಇದನ್ನೂ ಓದಿ: ಮೀರಾಬಾಯಿ ಕೊಪ್ಪಿಕರ್‌ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
ಈ ಕುರಿತು ಕೇಂದ್ರ ಸರ್ಕಾರ ಈವರೆಗೂ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಿರುವಾಗ ಉಪಯೋಗಕ್ಕೆ ಬಾರದ ಈ ಪ್ರಶಸ್ತಿಯನ್ನು ಇಟ್ಟುಕೊಂಡು ಏನು ಮಾಡಲಿ. ನಮ್ಮ ಜನರಿಗೆ ಸಿಗಬೇಕಾದ ಹಕ್ಕು ಸಿಗದಿದ್ದರೆ ನಾನು ಇದ್ದು ಏನು ಪ್ರಯೋಜನ ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಪರಿಶಿಷ್ಠ ಪಂಗಡಕ್ಕೆ ಸೇರಿಸದಿದ್ದರೆ ವಿಧಾನಸೌಧಕ್ಕೆ ತೆರಳಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.