ಕಾರವಾರ: ಜಿಲ್ಲೆಯ ಊರಿನಲ್ಲಿ ಒಂದು ಸೇತುವೆಗಾಗಿ 60 ವರ್ಷಗಳಿಂದ ಹೋರಾಟ ಮಾಡಿದರು. ಕೊನೆಗೂ ಸೇತುವೆ ನಿರ್ಮಾಣವೇನೋ ಆಯ್ತು. ಆದರೆ ನದಿ ಪ್ರವಾಹದಿಂದ ಸೇತುವೆ ಕೊಚ್ಚಿ ಹೋಗೋದರ ಜೊತೆಗೆ ಇಡೀ ಗ್ರಾಮವೇ ಮುಳುಗಿ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಹಾವುಗಳ ಕಾಟದಿಂದ ಜನ ಭಯ ಪಡುವಂತಾಗಿದೆ.
ಹೌದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಡೊಂಗ್ರಿ ಗ್ರಾಮದಲ್ಲಿ ಈ ದಾರುಣ, ಭಯಾನಕ, ಮನಕಲಕುವ ದೃಶ್ಯಗಳು ಕಂಡು ಬಂದಿವೆ. ಗಂಗಾವಳಿ ನದಿ ಪ್ರವಾಹದಿಂದ ಡೊಂಗ್ರಿ ಗ್ರಾಮಕ್ಕೆ ಗುಳ್ಳಾಪುರ ಸಂಪರ್ಕಿಸುವ ತೂಗು ಸೇತುವೆ ಕೊಚ್ಚಿ ಹೋಗಿದೆ. ಇದರ ಜೊತೆಗೆ ಈ ಗ್ರಾಮದ 100 ಕ್ಕೂ ಹೆಚ್ಚು ಮನೆಗಳು, ತೋಟ ಗದ್ದೆಗಳು ಸಂಪೂರ್ಣ ನಾಶವಾಗಿದೆ. ವಿಷ ಸರ್ಪಗಳು ಮನೆಗೆ ನುಗ್ಗುತ್ತಿವೆ.
ಮುಖ್ಯವಾಗಿ ಅಗತ್ಯ ವಸ್ತುಗಳನ್ನು ಸಾಗಿಸಲು ಊರಿನ ಜನರಿಗೆ ಈ ಪುಟ್ಟ ದೋಣಿಯೇ ಆಸರೆಯಾಗಿದೆ. ಪ್ರವಾಹ ಇಳಿಮುಖವಾದರೂ ಇಲ್ಲಿನ ಜನರ ಸಂಕಷ್ಟ ಮಾತ್ರ ತಪ್ಪಿಲ್ಲ ಎಂದು ಗ್ರಾಮಸ್ಥ ಬಾಬು ಹೇಳಿದ್ದಾರೆ.
ಪ್ರವಾಹದಿಂದ ಮನೆ ಕಳೆದುಕೊಂಡವರು ವಾಸಿಸಲು ಮನೆಯಲ್ಲದೇ ಪರರ ಮನೆ ಆಶ್ರಯಿಸಿದ್ದಾರೆ. ಜಿಲ್ಲಾಡಳಿತ ಪರಿಹಾರ ಹಣ ನೀಡಿಲ್ಲ. ಸರ್ಕಾರದ ಸಹಾಯವೂ ಇಲ್ಲ. ಹೀಗಾಗಿ ಎಲ್ಲವನ್ನೂ ಕಳೆದುಕೊಂಡು ಏನೂ ಇಲ್ಲವಾಗಿದೆ ಎಂದು ನಿರಾಶ್ರಿತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಪ್ರವಾಹದ ಅಬ್ಬರಕ್ಕೆ ಜನರ ಬದುಕು ಮೂರಾಬಟ್ಟೆಯಾಗಿಬಿಟ್ಟಿದೆ. ಜನರಿಗೆ ಕಣ್ಣೀರೊಂದೇ ಉಳಿದಿದೆ. ರಾಜಕೀಯ ಕಚ್ಚಾಟ, ನಾಟಕಗಳಲ್ಲೇ ಬ್ಯುಸಿಯಾಗಿರೋ ರಾಜಕೀಯ ನಾಯಕರು ನಮ್ಮ ಸಹಾಯಕ್ಕೆ ಬರಲಿ ಎಂಬುದೇ ಅಲ್ಲಿನ ಜನರ ಒತ್ತಾಯವಾಗಿದೆ.