ಚಿಕ್ಕಬಳ್ಳಾಪುರ: ಪ್ರಸಕ್ತ ರಾಜ್ಯ ರಾಜಕೀಯ ಬೆಳವಣಿಗೆಗಳು ಅಸಹ್ಯ ಮೂಡಿಸುತ್ತಿದೆ. ಬಿಹಾರದ ರಾಜಕೀಯಕ್ಕಿಂತ ಕರ್ನಾಟಕ ರಾಜಕೀಯ ಕೀಳಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಹಾರ ರಾಜಕೀಯಕ್ಕಿಂತ ಕರ್ನಾಟಕದ ರಾಜಕೀಯ ಕೀಳಾಗುತ್ತಿದೆ. ಕರ್ನಾಟಕದಲ್ಲಿ ಶಾಸಕರು ಮೂರನೇ ಹಂತದ ರಾಜಕಾರಣಕ್ಕೆ ಇಳಿದಿದ್ದಾರೆ. ತಮ್ಮ ಶಾಸಕತ್ವವನ್ನು ಮಾರಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಇತಿಶ್ರೀ ಹಾಡಲೇ ಬೇಕು, ಇಲ್ಲವಾದಲ್ಲಿ ನಾಡಿಗೆ ಈ ವಿಚಾರ ಕಳಂಕವಾಗಲಿದೆ ಎಂದು ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಏರುಪೇರುಗಳ ಬಗ್ಗೆ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ ಈ ಬಗ್ಗೆ ಚರ್ಚೆ ನಡೆಸಬೇಕಾದ ಶಾಸಕರು, ಮೂರನೇ ದರ್ಜೆಯ ರಾಜಕಾರಣ ಮಾಡುತ್ತಿರುವುದು ಬೇಸರ ಮೂಡಿಸಿದೆ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೇ ರಾಜ್ಯ ರಾಜಕೀಯವನ್ನು ಸರಿಮಾಡಲು ನಾಗರಿಕರು ಯೋಚನೆ ಮಾಡಬೇಕು. ಕೆಟ್ಟ, ಅಸಹ್ಯ ತರಿಸುವ ರಾಜಕಾರಣವನ್ನು ತಡೆಯಲು ನಾಗರಿಕರು ಆಲೋಚನೆ ಮಾಡಬೇಕು. ಇಲ್ಲವಾದಲ್ಲಿ ಇದೇ ಸ್ಥಿತಿ ಮುಂದೆಯೂ ನಡೆಯುತ್ತದೆ. ಹೀಗೆ ನಡೆಯಲು ನಾವು ಬಿಡಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv