ಬೆಂಗಳೂರು: ಕರ್ನಾಟಕ ಮತ್ತೆ ಮುಳುಗುತ್ತಾ? ಎರಡು ತಿಂಗಳ ಹಿಂದೆಯಷ್ಟೇ ಮಹಾ ಪ್ರವಾಹದಿಂದ ನಲುಗಿದ್ದ ರಾಜ್ಯದಲ್ಲೀಗ ಮತ್ತೆ ಮಳೆ ಆರ್ಭಟಿಸುತ್ತಿದೆ. ಈಗಾಗಲೇ ಏಳು ಮಂದಿಯನ್ನು ಬಲಿ ಪಡೆದಿರೋ ರಣ ಮಳೆ ಇನ್ನೂ ನಾಲ್ಕು ದಿನ ಅಬ್ಬರಿಸಿ ಬೊಬ್ಬಿರಿಯುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಮೈಸೂರು ಭಾಗದ ಚಾಮರಾಜನಗರ, ಮೈಸೂರು, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆಯಿಂದ ಶನಿವಾರದವರೆಗೂ ರೆಡ್ ಅಲರ್ಟ್ ಜಾರಿಯಲ್ಲಿದೆ. ಇತ್ತ ಮಹಾರಾಷ್ಟ್ರದಲ್ಲೂ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಆಗ್ತಿದ್ದು, ಉತ್ತರ ಕರ್ನಾಟಕಕ್ಕೆ ನೆರೆ ರಾಜ್ಯದಿಂದ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಳವಾಗ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿಗನರೆ ಸೇತುವೆ ಮಳೆ ಮುಳುಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ರಾತ್ರಿಯಿಡೀ ಪ್ರವಾಹ ಸ್ವರೂಪಿ ಮಳೆ ಆಗಿದೆ. ಶಿರುಕುಳಿ, ಅಗಸೂರಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು 10ಕ್ಕೂ ಹೆಚ್ಚು ಮಂದಿಯನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹುಬ್ಬಳ್ಳಿಯಲ್ಲಿ ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಧಾರಾಕಾರ ಮಳೆಯಾಗಿದೆ. ನಗರದ ಸಿದ್ದರಾಮೇಶ್ವರ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದ ಶುರುವಾಗಿದ್ದ ಮಳೆ ನಿಂತಿಲ್ಲ. ತಗ್ಗುಪ್ರದೇಶಗಳಲ್ಲಿರುವ ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಮಲ್ಲೆಶ್ವರಂ, ಸದಾಶಿವನಗರ, ಮೇಖ್ರಿ ಸರ್ಕಲ್, ಜಯನಗರ, ಬಿಟಿಎಂ, ಮೈಕೋಲೇಔಟ್ ಹೆಚ್.ಎಸ್.ಆರ್ ಲೇಔಟ್, ಕೆ ಆರ್ ಮಾರುಕಟ್ಟೆ, ಚಾಮರಾಜಪೇಟೆ, ಜೆಸಿ ರೋಡ್ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆ ಸುರಿದಿದೆ. ಬಿಟಿಎಂ ಎರಡನೇ ಹಂತದಲ್ಲಿ ಮರ ಬಿದ್ದಿದೆ.