ಬೆಂಗಳೂರು: ಆಸ್ಪತ್ರೆಗಳ ಬಿಲ್ನಲ್ಲಿ ಔಷಧಿಗಳ ದರ ನಮೂದಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದ ಆದೇಶಕ್ಕೆ ಕರ್ನಾಟಕ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.
ಖಾಸಗಿ ಆಸ್ಪತ್ರೆಗಳ ಒಕ್ಕೂಟದೊಂದಿಗೆ ಆರೋಗ್ಯ ಸಚಿವರು ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಸರ್ಕಾರ ಮಣಿದಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಅ. 1ರಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಖಾಸಗಿ ಆಸ್ಪತ್ರೆಗಳಿಗೆ ಈ ಕುರಿತು ಆದೇಶ ಹೊರಡಿಸಿತ್ತು. ನ. 1ರಿಂದ ಆದೇಶ ಜಾರಿಗೆ ಬರಬೇಕಿತ್ತು. ಆದರೆ, ಖಾಸಗಿ ಆಸ್ಪತ್ರೆಗಳ ಆಕ್ಷೇಪದ ಹಿನ್ನೆಲೆಯಲ್ಲಿ ಸದ್ಯಕ್ಕೆ ಆದೇಶಕ್ಕೆ ತಡೆ ನೀಡಲಾಗಿದ್ದು, ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ಖರೀದಿ ದರ ಬಹಿರಂಗಪಡಿಸಲು ವಿರೋಧ
ಆಸ್ಪತ್ರೆಯ ಬಿಲ್ನಲ್ಲಿ ಔಷಧಿಗಳ ದರದ ಜೊತೆಗೆ ಲ್ಯಾಂಡಿಂಗ್ ಕಾಸ್ಟ್ ವಿವರಗಳನ್ನು ನಮೂದಿಸುವುದರಿಂದ ಸಮಸ್ಯೆಯಾಗಬಹುದು ಎಂಬುದು ಖಾಸಗಿ ಆಸ್ಪತ್ರೆಗಳ ವಾದವಾಗಿದೆ. ಈ ವಿವರಗಳು ಬಹಿರಂಗವಾದರೆ ತಮ್ಮ ವ್ಯಾಪಾರ ರಹಸ್ಯಗಳಿಗೆ ಧಕ್ಕೆಯಾಗಬಹುದು ಹಾಗೂ ಔಷಧ ಕಂಪನಿಗಳು ಆಸ್ಪತ್ರೆಗಳಿಗೆ ನೀಡುವ ರಿಯಾಯಿತಿಯನ್ನು ನಿಲ್ಲಿಸಬಹುದು ಎಂಬ ಆತಂಕವನ್ನು ಆಸ್ಪತ್ರೆಗಳ ಒಕ್ಕೂಟ ವ್ಯಕ್ತಪಡಿಸಿದೆ.
ಔಷಧಿಗಳ ಬೆಲೆ ನಿಗದಿ ವಿಚಾರ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ವ್ಯಾಪ್ತಿಗೆ ಬರಬಹುದಾದ್ದರಿಂದ, ಈ ಕುರಿತು ಕಾನೂನು ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅಲ್ಲಿಯವರೆಗೆ ಔಷಧಿ ದರ ನಮೂದು ಮಾಡುವ ಆದೇಶಕ್ಕೆ ತಾತ್ಕಾಲಿಕ ತಡೆ ಮುಂದುವರಿಯಲಿದೆ. ಇದನ್ನೂ ಓದಿ: ಬಿಹಾರದಲ್ಲಿ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ದುರಂತ; 15 ವರ್ಷದೊಳಗಿನ 13 ಮಕ್ಕಳು ಸಾವು
ಇದೇ ಸಭೆಯಲ್ಲಿ ಮೃತದೇಹ ಹಸ್ತಾಂತರಕ್ಕೆ ಸಂಬಂಧಿಸಿದ ವಿಚಾರವೂ ಚರ್ಚೆಗೆ ಬಂದಿದೆ. ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತದೇಹ ಹಸ್ತಾಂತರವನ್ನು ತಡೆಹಿಡಿಯುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸಚಿವರ ಮುಂದೆ ತಿಳಿಸಿದೆ.
ಮೃತದೇಹ ಹಸ್ತಾಂತರಕ್ಕೆ ಈಗಾಗಲೇ ನಿಯಮಗಳಿದ್ದು, ಅವುಗಳನ್ನು ಪಾಲಿಸುತ್ತಿದ್ದೇವೆ. ಇತ್ತೀಚೆಗೆ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತದೇಹ ನೀಡದೆ ತಡೆಹಿಡಿದ ಪ್ರಕರಣಗಳು ನಡೆಯುತ್ತಿಲ್ಲ ಎಂದು ಒಕ್ಕೂಟದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಬಾಂಡ್ ಷರತ್ತು ಬ್ರೇಕ್ – 5 ದಿನ ತಿಹಾರ್ ಜೈಲಿಗೆ ಸೌರವ್ ದಾಸ್, ಅಶುತೋಷ್ ರಾಂಕಾ

