ನವದೆಹಲಿ: ವಿಶ್ವಾಸ ಮತಯಾಚನೆಗೆ ಈಗಾಗಲೇ ವಿಳಂಬ ಮಾಡುತ್ತಿರುವ ದೋಸ್ತಿ ಸರ್ಕಾರಕ್ಕೆ ಈಗ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಪಕ್ಷೇತರ ಶಾಸಕರಾದ ಆರ್ ಶಂಕರ್ ಮತ್ತು ನಾಗೇಶ್ ಇಂದೇ ವಿಶ್ವಾಸಮತ ಸಾಬೀತಿಗೆ ಸೂಚಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಇಂದು ಈ ಅರ್ಜಿಯ ವಿಚಾರಣೆ ನಡೆಸುವುದಿಲ್ಲ. ಇಂದೇ ವಿಶ್ವಾಸ ಮತಯಾಚನೆ ನಡೆಸುವಂತೆ ಆದೇಶಿಸುವುದಿಲ್ಲ ಎಂದು ಹೇಳುವ ಮೂಲಕ ಬಿಗ್ ರಿಲೀಫ್ ನೀಡಿದೆ.
Advertisement
Advertisement
ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ಅತೃಪ್ತರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿದೆ. ಹೀಗಾಗಿ ಇಂದೇ ವಿಶ್ವಾಸ ಮತಯಾಚನೆ ನಡೆಸುವಂತೆ ಆದೇಶ ನೀಡಿ ಎಂದು ಮನವಿ ಮಾಡಿದರು.
Advertisement
ಈ ವೇಳೆ ನ್ಯಾ.ರಂಜನ್ ಗೊಗೋಯ್ ಅವರು, ಸ್ಪೀಕರ್ ನಿರ್ಧಾರದ ವಿಚಾರದ ಬಗ್ಗೆ ನಾವು ಮಧ್ಯಪ್ರವೇಶಿಸುವುದಿಲ್ಲ. ಇಂದೇ ವಿಶ್ವಾಸ ಮತಯಾಚನೆ ನಡೆಸುವಂತೆ ನಾವು ಆದೇಶ ನೀಡುವುದಿಲ್ಲ ಎಂದಾಗ ರೋಹ್ಟಗಿ ಹಾಗಾದರೆ ನಾಳೆಯಾದರೂ ವಿಚಾರಣೆ ನಡೆಸಿ ಎಂದು ಮನವಿ ಮಾಡಿದರು. ಇದಕ್ಕೆ ನೋಡೋಣ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.
Advertisement
ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ವಕೀಲೆ ಲಿಲ್ಲಿ ಥೋಮಸ್ ಕರ್ನಾಟಕದಲ್ಲಿ ಈಗ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಪತ್ರಿಕೆಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಸುದ್ದಿ ಬರುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, ಮೇಡಂ ನೀವು ಸುದ್ದಿ ಪತ್ರಿಕೆ ಓದಬೇಡಿ. ಸುದ್ದಿ ವಾಹಿನಿಗಳನ್ನು ವೀಕ್ಷಿಸಬೇಡಿ. ಏನು ಹೇಳಬೇಕೋ ಅದನ್ನು ಒಂದು ಪ್ರತ್ಯೇಕ ಅರ್ಜಿ ಸಲ್ಲಿಸಿ ಹೇಳಿಬಿಡಿ ಎಂದು ಸೂಚಿಸಿದರು.
ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಇಂದಿನ ವಿಚಾರಣೆಯ ಪಟ್ಟಿಯಲ್ಲಿ ಇರದ ಕಾರಣ ಈ ಅರ್ಜಿಯ ವಿಚಾರಣೆ ನಡೆಯಲಿಲ್ಲ.
ಕಾಂಗ್ರೆಸ್ ಅರ್ಜಿಯಲ್ಲಿ ಏನಿದೆ?
ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ. ಕಲಾಪಕ್ಕೆ ಹಾಜರಾಗಬೇಕೇ? ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ. ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ. ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು.
ಜೆಡಿಎಸ್ ವಾದ ಏನು?
ರಾಜ್ಯಪಾಲರು 2 ಬಾರಿ ಬಹುಮತ ಸಾಬೀತಿಗೆ ಸೂಚಿಸಿದ್ದಾರೆ. ಸಿಎಂ ಅವರೇ ವಿಶ್ವಾಸ ಮತಯಾಚನೆ ಕೇಳಿದ್ದು ಈ ಚರ್ಚೆ ನಡೆಯತ್ತಿರುವಾಗಲೇ ಈ ರೀತಿಯ ನಿರ್ದೇಶನ ನೀಡಬಾರದಿತ್ತು. ವಿಶ್ವಾಸಮತದ ಚರ್ಚೆ ಬಳಿಕ ಮತಕ್ಕೆ ಹಾಕುವುದಾಗಿ ಸ್ಪೀಕರ್ ಹೇಳಿದ್ದಾರೆ. ಚರ್ಚೆ ಮುಕ್ತಾಯವಾಗುವವರೆಗೂ ರಾಜ್ಯಪಾಲರು ಸಮಯ ನಿಗದಿಪಡಿಸದಂತೆ ಸೂಚಿಸಿ.