– 116 ಅಭ್ಯರ್ಥಿಗಳು ವಶಕ್ಕೆ, ಪರೀಕ್ಷೆ ಮುಂದೂಡಿ ಎಡಿಜಿಪಿಯಿಂದ ಆದೇಶ
ಹಾಸನ: ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಜಾಲವನ್ನು ಜಿಲ್ಲೆಯ ಪೋಲಿಸರು ಭೇದಿಸಿದ್ದಾರೆ.
ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಭಾನುವಾರ ನಿಗದಿಯಾಗಿತ್ತು. ಹೀಗಾಗಿ ಅಭ್ಯರ್ಥಿಗಳನ್ನು ಕುಳ್ಳಿರಿಸಿ ಪ್ರಶ್ನೆ ಪತ್ರಿಕೆ ಹಂಚಲು ಸಿದ್ಧತೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಕಿಂಗ್‍ಪಿನ್ ಶಿವಕುಮಾರ್ ಸ್ವಾಮಿಯನ್ನು ಬಂಧಿಸಲಾಗಿದೆ.
Advertisement
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅವರು ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ಆರೋಪಿ ಶಿವಕುಮಾರ್ ಸ್ವಾಮಿ ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಈ ಬೆನ್ನಲ್ಲೇ ಈಗ ಪೊಲೀಸ್ ಪೇದೆ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ. ನಾಳೆ ಪರೀಕ್ಷಾರ್ಥಿಗಳನ್ನು ನೇರವಾಗಿ ಪರೀಕ್ಷಾ ಕೊಠಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದ.
Advertisement
ಪೊಲೀಸ್ ಪೇದೆ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಈ ಜಾಲದ ಬಗ್ಗೆ ಖಚಿತ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ರಾಜ್ಯದ ವಿವಿಧ ಭಾಗಗಳಿಂದ ವಿಶೇಷವಾಗಿ ಉತ್ತರ ಕರ್ನಾಟಕದಿಂದ ಸುಮಾರು 116 ಅಭ್ಯರ್ಥಿಗಳನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಕಲ್ಲಮಠದ ಶ್ರೀನಂಜುಂಡೇಶ್ವರ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ಸೇರಿಸಲಾಗಿತ್ತು. ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಅವುಗಳಿಗೆ ಉತ್ತರ ನೀಡಲು ಶಿವಕುಮಾರ್, ಬಸವರಾಜು ಒಳ ಸಂಚು ರೂಪಿಸಿದ್ದರು.
ಆರೋಪಿಗಳಿಗೆ ಬಲೆ ಬಿಸಿದ್ದ ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್.ವೇಣುಗೋಪಾಲ್ ಮತ್ತು ಬಿ.ಬಾಲರಾಜು ರವರ ನೇತೃತ್ವದ 2 ವಿಶೇಷ ತಂಡಗಳನ್ನು ರಚಿಸಿ, ಹಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಈ ತಂಡವು ಇಂದು ಬೆಳಗ್ಗೆ ದಾಳಿ ನಡೆಸಿದೆ. ಈ ಜಾಲದ ಪ್ರಮುಖ ರುವಾರಿಯಾಗಿದ್ದ ಶಿವಕುಮಾರ್ ನನ್ನು ಪ್ರಶ್ನೆಪತ್ರಿಕೆ ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ರಮವಾಗಿ ಗುಂಪು ಸೇರಿಸಿದ್ದ ಸುಮಾರು 116 ಅಭ್ಯರ್ಥಿಗಳು, 7 ಜನ ಚಾಲಕರು, ಕ್ಲೀನರ್ಸ್ ಹಾಗೂ 4 ಮಿನಿ ಬಸ್, 1 ಇನ್ನೋವಾ ಕಾರ್ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರತಿ ಅಭ್ಯರ್ಥಿಯಿಂದ 6 ರಿಂದ 8 ಲಕ್ಷ ರೂ. ಹಣ ಪಡೆಯಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಕೃತ್ಯವನ್ನು ಎಸಗಲು ಬೇರೆ ಬೇರೆ ಆಸಾಮಿಗಳ ಹೆಸರಿನ ದಾಖಲಾತಿಗಳನ್ನು ಬಳಸಿ, ಮೊಬೈಲ್ ಸಿಮ್ ಕಾರ್ಡ್‍ಗಳನ್ನು ಪಡೆದಿರುವುದಾಗಿಯೂ ಮತ್ತು ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ತಿಳಿದು ಬಂದಿದೆ. ದಾಳಿ ವೇಳೆ ಬಸವರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರಿದಿರುತ್ತದೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv