ಬೆಂಗಳೂರು: ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕೈಲಾಸ ಮಾನಸ ಸರೋವರ ಯಾತ್ರೆ ವೇಳೆ ಸಿಲುಕಿದ್ದ 299 ಕನ್ನಡಿಗರು ಸುರಕ್ಷಿತವಾಗಿದ್ದಾರೆ.
ನೇಪಾಳದ ಸಿಮಿಕೋಟ್ ಮತ್ತು ನೇಪಾಳ್ ಗಂಜ್‍ನಲ್ಲಿರುವ ಕರ್ನಾಟಕದ ಪ್ರವಾಸಿಗರ ಜೊತೆಗೆ ಭಾರತೀಯ ರಾಯಭಾರ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಆದರೆ ಸದ್ಯದ ಹವಾಮಾನ ವೈಪರೀತ್ಯದಿಂದಾಗಿ ಅವರನ್ನು ತಕ್ಷಣಕ್ಕೆ ಕರೆದುಕೊಂಡು ಬರುವುದು ಸಾಧ್ಯವಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.
Advertisement
ಮಾನಸ ಸರೋವರ ಯಾತ್ರೆಯಲ್ಲಿ ಕರ್ನಾಟಕದ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರಿಂದ ರಾಜ್ಯ ಸರ್ಕಾರ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರ ನೆರವನ್ನು ಕೋರಿತ್ತು. ಅಲ್ಲದೇ ದೆಹಲಿಯಲ್ಲಿರುವ ಕರ್ನಾಟಕದ ಸ್ಥಾನಿಕ ನಿರ್ದೇಶಕರಿಗೆ ಅಗತ್ಯ ಪರಿಹಾರ ಕ್ರಮಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದರು.
Advertisement
ಹಾಸನದಿಂದ ಹೊರಟ್ಟಿದ್ದ 43 ಮಂದಿ ಸುರಕ್ಷಿತವಾಗಿದ್ದಾರೆ. ಮಂಡ್ಯ, ಮೈಸೂರು, ರಾಮನಗರದವರು ಕೂಡಾ ಯಾತ್ರೆಗೆ ಹೋಗಿದ್ದರು. ಇವರಲ್ಲಿ ಕುಮಾರಸ್ವಾಮಿಯವರ ಕ್ಷೇತ್ರವಾದ ಚನ್ನಪಟ್ಟಣ ತಾಲೂಕಿನ ನಾಗವಾರದ ರಂಗಸ್ವಾಮಿ, ಬೇವೂರಿನ ರಾಮಕೃಷ್ಣ, ರಾಂಪುರದ ಮಲ್ಲೇಶ್, ಕೋಟೆಯ ಶಿವರಾಮು 15 ದಿನಗಳ ಹಿಂದೆ ಯಾತ್ರೆ ಹೊರಟ್ಟಿದ್ದರು. ಆದರೆ ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಯಾತ್ರಾರ್ಥಿಗಳ ಸಂಬಂಧಿಕರು ಯಾವುದೇ ಮಾಹಿತಿಗಾಗಿ ರಾಯಭಾರ ಕಚೇರಿಯ ಅಧಿಕಾರಿ ಪ್ರಣವ್ ಮಹೇಶ್‍ರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ. ಅವರ ದೂರವಾಣಿ ಸಂಖ್ಯೆ – 977 985-1107006 ಗೆ ಕರೆಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.