ನವದೆಹಲಿ: ಮಹದಾಯಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ಉತ್ತರ ಕರ್ನಾಟಕದ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್. ಮಹದಾಯಿ ನೀರಿಗಾಗಿ ನೀವು ಇನ್ನೂ ಒಂದು ವರ್ಷ ಕಾಯಲೇಬೇಕು.
ಹೌದು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಜೀವಜಲ ಮಹದಾಯಿಗಾಗಿ ಭಾರೀ ಹೋರಾಟ ನಡೀತು. ಆ ಕೇಸ್‍ಗಾಗಿ ಜನ ಈಗಲೂ ಕೋರ್ಟು ಕಚೇರಿ ಅಂತ ಅಲೀತಿದ್ದಾರೆ. ಇಷ್ಟಾದ್ರೂ ಮಹದಾಯಿ ನೀರು ಸಿಗೋದು ಅನುಮಾನವೇ ಆಗಿದೆ. ಯಾಕಂದ್ರೆ ಜನಪ್ರತಿನಿಧಿಗಳು, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಜನ ಇನ್ನೂ ಒಂದು ವರ್ಷ ಕಾಯಬೇಕಿದೆ. ಈಗಾಗಲೇ ಎರಡು ಬಾರಿ ಅವಧಿ ವಿಸ್ತರಿಸಿಕೊಂಡಿರುವ ನ್ಯಾಯಾಧಿಕರಣ ದೀರ್ಘವಾದ ವಿಚಾರಣೆ ನಡೆಸುತ್ತಲೇ ಇದೆ. ಮೂರನೇ ಅವಧಿಯಲ್ಲೂ ಸುದೀರ್ಘ ವಿಚಾರಣೆ ನಡೆಸುತ್ತಲೇ ಕುಳಿತರೆ ಮಹದಾಯಿ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗೀ ಮಹದಾಯಿ ನ್ಯಾಯಾಧಿಕರಣ ಮೂರು ರಾಜ್ಯಗಳಿಗೆ ವಿಚಾರಣೆ ಬೇಗ ಮುಗಿಸಲು ಸಹಕರಿಸುವಂತೆ ನೋಟಿಸ್ ಜಾರಿ ಮಾಡಿದೆ.
Advertisement
Advertisement
ಮಹದಾಯಿ ವ್ಯಾಪ್ತಿಯ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ನೋಟಿಸ್ ನೀಡಿದ್ದು 25 ಪ್ರಮುಖ ಪ್ರಶ್ನೆಗಳನ್ನು ವಿಚಾರಣೆಗೆ ಸೀಮಿತಗೊಳಿಸುವಂತೆ ಹಾಗೂ ಸಾಕ್ಷ್ಯಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಶೀಘ್ರವಾಗಿ ಎಲ್ಲ ರಾಜ್ಯಗಳು ವಾದ ಮಂಡನೆ ಮುಗಿಸಬೇಕು ಅಂತ ನೋಟಿಸ್ ನಲ್ಲಿ ತಾಕೀತು ಮಾಡಿದೆ. 2018ರ ಅಗಸ್ಟ್ 20ಕ್ಕೆ ಮಹದಾಯಿ ನ್ಯಾಯಾಧಿಕರಣ ಅವಧಿ ಮುಕ್ತಾಯಗೊಳ್ಳಲಿದ್ದು ಅಷ್ಟರೊಳಗೆ ಅಂತಿಮ ತೀರ್ಪು ನೀಡಬೇಕು ಎಂಬುದು ನ್ಯಾಯಾಧಿಕರಣದ ಉದ್ದೇಶ. ಈಗಾಗಲೇ ನ್ಯಾಯಾಧಿಕರಣದ ಮುಂದೆ ಗೋವಾ-ಮಹಾರಾಷ್ಟ್ರ ರಾಜ್ಯಗಳು ತಮ್ಮ ಸಾಕ್ಷ್ಯ ನುಡಿದಿದ್ದು, ಕರ್ನಾಟಕದಿಂದ 4 ಮಂದಿಯ ಪೈಕಿ ಇಬ್ಬರಷ್ಟೇ ನ್ಯಾಯಾಧಿಕರಣದ ಮುಂದೆ ಸದ್ಯ ಸಾಕ್ಷ್ಯ ನುಡಿದಿದ್ದಾರೆ. ಮುಂದಿನ ತಿಂಗಳು ಇನ್ನಿಬ್ಬರು ಸಾಕ್ಷ್ಯಗಳನ್ನು ನ್ಯಾಯಾಧಿಕರಣದ ಮುಂದೆ ದಾಖಲಿಸಿದ್ದಾರೆ.
Advertisement
ಕೆಲ ದಿನಗಳ ಹಿಂದೆ ತಮ್ಮದೇ ಪಕ್ಷದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜೊತೆ ಮಾತನಾಡಿ ವಿವಾದ ಬಗೆಹರಿಸುವುದಾಗಿ ಮಾತು ನೀಡಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹಿನ್ನಡೆಯಾಗಿದೆ. ರಾಜ್ಯ ಬಿಜೆಪಿ ನಾಯಕರ ಮಾತುಕತೆಗೆ ಪರಿಕ್ಕರ್ ಸೊಪ್ಪು ಹಾಕುತ್ತಿಲ್ಲ. ಕಳೆದ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಣಿಯಲ್ಲೂ ಕೂಡಾ ಇದು ಸಾಬೀತಾಗಿದೆ. ಎಲೆಕ್ಷನ್ ಗೂ ಮುನ್ನ ವಿವಾದ ಬಗೆಹರಿಸಿ ಬೆನ್ನು ತಟ್ಟಿಕೊಂಡು ಮತ ಕೇಳಿಬೇಕೆಂದುಕೊಂಡಿದ್ದ ಬಿಜೆಪಿ ನಾಯಕರು ಪರಿಕ್ಕರ್ ನಡೆ ನೋಡಿ ಸುಮ್ಮನಾಗಿದ್ದಾರೆ.
Advertisement
ಅತ್ತ ಪತ್ರ ಬರೆದಿದ್ದೇವೆ, ಗೋವಾ ಸಿಎಂ ಮಾತುಕತೆಗೆ ತಯಾರಿಲ್ಲ ಅಂತ ರಾಜ್ಯ ಸರ್ಕಾರ ಹೇಳುತ್ತಿದೆ. ಇದುವರೆಗೂ ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಲಕ್ಷಣಗಳು ಕಂಡಿಲ್ಲ. ಹೀಗಾಗಿ ಅತ್ತ ಚುನಾವಣೆ ವೇಳೆಗೆ ಸಮಸ್ಯೆ ಬಗಹರಿಹಬಹುದು ಅಂತಾ ಕಾದು ಕುಳಿತಿರುವ ಮಹದಾಯಿ ಹೋರಾಟಗಾರರಿಗೆ ನ್ಯಾಯಾಧಿಕರಣ ಅನಿವಾರ್ಯವಾಗಿದ್ದು ಇನ್ನೂ ಒಂದು ವರ್ಷ ಕಾಲ ತಳ್ಳಲೇಬೇಕಿದೆ.