ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಿನ ರೈತ ಸಮೂಹಕ್ಕೊಂದು ಭರವಸೆ ನೀಡಿದ್ದೆ. ಮುಖ್ಯಮಂತ್ರಿಯಾದ ತಕ್ಷಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ಸಾಲಮನ್ನಾ ಹಾಗೆಯೇ ಸಹಕಾರಿ ಸಂಘದ ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದೆ. ಈ ವಿಷಯದ ಬಗ್ಗೆ ಈಗಾಗಲೇ ಸಂಬಂಧಪಟ್ಟವರಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ಅವರು ಅಂಕಿ-ಅಂಶಗಳನ್ನು ನೋಡಿ ಸಂಜೆಯೊಳಗೆ ಅಥವಾ ನಾಳೆ ಬೆಳಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಹೇಳಿದ್ರು.
Advertisement
ಜನರ ಬೆಂಬಲ ನನ್ನಪರ ಇದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೈತಿಕವಾಗಿ ಚುನಾವಣಾ ಫಲಿತಾಂಶದ ನಂತರ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಜನರ ಬೆಂಬಲ ನನ್ನ ಹಾಗೂ ಪಕ್ಷದ ಪರ ಇದೆ. ಈ ವಿಚಾರದಲ್ಲಿ ನಾನು ನೂರಕ್ಕೆ ನೂರು ಯಶಸ್ಸನ್ನು ಕಾಣುತ್ತೇನೆಂಬ ವಿಶ್ವಾಸ ನನಗಿದೆ ಎಂದರು.
Advertisement
ಬಿಜೆಪಿ ಸರ್ಕಾರ ರಚಿಸಬೇಕು ಎಂಬ ಜನಾದೇಶವನ್ನು ಒಪ್ಪುವ ಬಹಳಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಇದ್ದಾರೆ. ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ತಮಗೆ ಬೆಂಬಲವನ್ನು ಕೊಡಬೇಕು ಅಂತ ವಿನಂತಿಸುತ್ತೇನೆ. ಅಲ್ಲದೇ ಅವರು ಆತ್ಮಸಾಕ್ಷಿಯಾಗಿ ಬಿಜೆಪಿಗೆ ತಮ್ಮ ಮತವನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
Advertisement
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಬಹುಮತ ಇಲ್ಲದಾಗ ಆತ್ಮಸಾಕ್ಷಿಯಂತೆ ಮತ ನೀಡಿ ಅಂತ ವಿನಂತಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಗೆದ್ದು ಯಶಸ್ಸು ಕಂಡಿದ್ದರು ಎಂಬುದು ಈ ದೇಶದ ಜನರಿಗೆ ಗೊತ್ತಿರುವ ವಿಚಾರವಾಗಿದೆ. ಹೀಗಾಗಿ 224 ಶಾಸಕರು ಕೂಡ ತಮ್ಮ ಆತ್ಮಸಾಕ್ಷಿಯಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ನನಗಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.
Advertisement
ಸರ್ವೋಚ್ಛ ನ್ಯಾಯಾಲಯದಲ್ಲಿ ಈ ವಿಚಾರ ಇರುವುದರಿಂದ ವಿಶ್ವಾಸ ಮತದ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕ. ಹೀಗಾಗಿ ರಾಜ್ಯದ ಎಲ್ಲಾ ಜನತೆಗೆ ಹಾಗೂ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಿದ್ರು.