ನವದೆಹಲಿ: ದೋಸ್ತಿ ಪಕ್ಷ ಉರುಳಲು ಕಾರಣರಾಗಿದ್ದ ಅನರ್ಹ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದ್ದು, ನ್ಯಾಯಾಲಯ ಯಾವ ನಿರ್ಧಾರಕ್ಕೆ ಬರಲಿದೆ ಎಂಬ ಕುತೂಹಲ ಮೂಡಿದೆ.
ಈಗಾಗಲೇ ಅನರ್ಹ ಶಾಸಕರು ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಂತೆ ನಿಯಮಗಳ ಅನ್ವಯ ಮಂಗಳವಾರ ಅನರ್ಹ ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆಗೆ ಬರಲಿದೆ. ಈ ವೇಳೆ ಕೋರ್ಟ್ ನೇರ ವಿಚಾರಣೆ ಆರಂಭ ಮಾಡುತ್ತಾ? ಅಥವಾ ಕೆಪಿಸಿಸಿ, ಸ್ಪೀಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Advertisement
Advertisement
ಅರ್ಜಿ ವಿಚಾರಣೆಯ ಕುರಿತು ನ್ಯಾಯಾಲಯದ ವೆಬ್ ಸೈಟ್‍ನಲ್ಲಿ ಮಾಹಿತಿ ನೀಡಲಾಗಿದ್ದು, ಸ್ಪೀಕರ್ ಅವರ ಆದೇಶ ಪ್ರಶ್ನಿಸಿ 17 ಶಾಸಕರು ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆಯನ್ನು ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ನಡೆಸುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವ ಅನರ್ಹ ಶಾಸಕರಿಗೆ ಕೋರ್ಟಿಗೆ ಹಾಜರಾಗುವಂತೆ ರಿಜಿಸ್ಟ್ರಾರ್ ಮೂಲಕ ನ್ಯಾಯಾಲಯ ಸೂಚಿಸಿದೆ.
Advertisement
ಈಗಾಗಲೇ ಕೆಪಿಸಿಸಿ ಪ್ರಕರಣದ ಕುರಿತು ಕೆವಿಯಟ್ ಸಲ್ಲಿಕೆ ಮಾಡಿರುವುದರಿಂದ ನ್ಯಾಯಾಲಯ ನೇರ ವಿಚಾರಣೆ ಆರಂಭ ಮಾಡುತ್ತಾ? ಅಥವಾ ಅವರಿಗೆ ನೋಟಿಸ್ ನೀಡಿ ಸೂಚನೆ ನೀಡುತ್ತಾ ಎಂಬ ಕುತೂಹಲ ಇದೆ. ನೇರ ವಿಚಾರಣೆ ಆರಂಭ ಮಾಡುವುದು ಅಥವಾ ಕೆಪಿಸಿಸಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡುವುದು ನ್ಯಾಯಮೂರ್ತಿಗಳ ವಿವೇಚನೆ ಮೇರೆಗೆ ನಿರ್ಧಾರವಾಗಲಿದೆ.