ಮೀರಾಬಾಯಿ ಕೊಪ್ಪಿಕರ್‌ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

Public TV
2 Min Read
MIRABAI KOPIKAR

ಬಾಗಲಕೋಟೆ: ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಬಾಗಲಕೋಟೆಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ ಮೀರಾಬಾಯಿ ಕೊಪ್ಪಿಕರ್, ಹಾಗೂ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಸಿದ್ಧಗಂಗಾ ಮಠವನ್ನು ಆಯ್ಕೆ ಮಾಡಲಾಗಿದೆ.

MIRABAI KOPIKAR 1

ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2020 ಮತ್ತು 2021 ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ. ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರವು ಈಬಾರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಇಚ್ಚಿಸಿದೆ. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅಶೋಕ್ ಬಂಗಾರೆಪ್ಪಾ ಹಿಂಚಿಗೇರಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಇದನ್ನೂ ಓದಿ: ಬಿಸಿಯೂಟ ಯೋಜನೆಗೆ ‘ಪಿಎಂ ಪೋಷಣ್’ ಮರುನಾಮಕರಣ ಮಾಡಿದ ಕೇಂದ್ರ

siddaganga mutt

ಆಯ್ಕೆ ಸಮಿತಿಯು 2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್ ಮತ್ತು 2021ನೇ ಸಾಲಿಗೆ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠವನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ. ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂ. ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುತ್ತಿದೆ. ಮೀರಾಬಾಯಿ ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ್ ವಂಶದ ಕುಡಿ. ಇವರಿಗೆ 96 ವರ್ಷವಾಗಿದ್ದು, ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.

MIRABAI KOPIKAR 2

ಗಾಂಧಿವಾದಿಯಾಗಿದ್ದ ಕೊಪ್ಪಿಕರ್ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು. ಈಗ ವಯಸ್ಸಾದ ನಿಮಿತ್ತ ನೇಯ್ಗೆ ಮಾಡುತ್ತಿಲ್ಲ. ಗಾಂಧಿವಾದಿಗಳಾಗಿದ್ದ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.

MIRA BAI KOPIKAR

ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದರು. ವಾತ್ಸಲ್ಯ ಧಾಮ ವಿನೋಬಾ ಭಾವೆಯವರ ತಾಯಿ ಮೂಲ ಜಮಖಂಡಿಯವರಾದ ರುಕ್ಮಿಣಿ ಭಾವೆಯವರದ್ದಾಗಿದ್ದು, ಮುಧೋಳದಲ್ಲಿ ಅವರು 2.5 ಎಕರೆ ಜಾಗವನ್ನು ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಿದ್ದರು. ಆರಂಭದಲ್ಲಿ 20 ಜನರಿದ್ದರು. ಈಗ ಮೂರು ಜನರಷ್ಟೇ ವಾಸ ಮಾಡುತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೊನಾ ಪ್ರಕರಣ – ಇಂದು 539 ಕೇಸ್, 17 ಸಾವು

ಕೊಪ್ಪಿಕರ್ ಅವರಿಗೆ 2008 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಪ್ರಶಸ್ತಿಯನ್ನು ಇವರಿಗೆ ಕೊಡಲು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಶ್ರಮಕ್ಕೆ ಆಗಮಿಸಿ, ಚೆಕ್ ಹಾಗೂ ಮೂರು ಗ್ರಾಂ ಬಂಗಾರದ ಪದಕವನ್ನು ಕೊಟ್ಟಿದ್ದರು. ಅವರು ನೀಡಿದ ಚೆಕ್ ಹಣ ಇನ್ನೂ ಬ್ಯಾಂಕ್‍ನಲ್ಲಿದ್ದು, ಅದನ್ನು ಜನತೆಯ ಕಲ್ಯಾಣಕ್ಕೆ ಬಳಸಲು ಹೇಳಿದ್ದಾರೆ. ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *