ಮುಂಬೈ: ಕರ್ನಾಟಕ (Karnataka) -ಮಹಾರಾಷ್ಟ್ರ (Maharashtra) ಗಡಿ ವಿವಾದ ಕೇಂದ್ರದ ಅಂಗಳ ತಲುಪಿದೆ. ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ದೂರು ನೀಡಿದೆ.
ಕರ್ನಾಟಕದಲ್ಲಿ ಮಹಾರಾಷ್ಟ್ರಿಗರ ಮೇಲೆ ದಾಳಿಗಳು ನಡೆಯುತ್ತಿವೆ. ಕೂಡಲೇ ಅವರ ರಕ್ಷಣೆಗೆ ಸೂಚಿಸಬೇಕು. ಕರ್ನಾಟಕ ಸಿಎಂ ಪ್ರಚೋದನಾಕಾರಿ ಹೇಳಿಕೆ ನೀಡ್ತಿದ್ದಾರೆ ಎಂದು ಆರೋಪಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಎನ್‍ಸಿಪಿಯ ಸುಪ್ರಿಯಾ ಸುಳೆ ನೇತೃತ್ವದ ನಿಯೋಗ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಗೃಹಸಚಿವ ಅಮಿತ್ ಶಾ, ಶೀಘ್ರವೇ ಸಿಎಂಗಳ ಸಭೆ ಕರೆಯುವ ಭರವಸೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಇದೇ ತಿಂಗಳ 14ಕ್ಕೆ ಅಮಿತ್ ಶಾ ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಮಹಾ ಕ್ಯಾತೆ ಇಲ್ಲಿಗೆ ನಿಂತಿಲ್ಲ. ಲೋಕಸಭೆಯಲ್ಲಿ ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ, ಕರ್ನಾಟಕ ವಿರುದ್ಧ ದ್ವೇಷ ಚಿಮ್ಮಿದ್ದಾರೆ. ಗಡಿಯಲ್ಲಿ ಕನ್ನಡ ಪರ ಸಂಘಟನೆಗಳು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿವೆ. ಮರಾಠಿಗಳು ಆತಂಕದಿಂದ ಜೀವನ ಮಾಡುವಂತಾಗಿದೆ. ಸಿಎಂ ಬೊಮ್ಮಾಯಿ (Basavaraj Bommai) ಪ್ರಚೋದನಾಕಾರಿ ಹೇಳಿಕೆ ನೀಡ್ತಿದ್ದಾರೆ. ಕೇಂದ್ರ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ ಜ್ಞಾನೇಂದ್ರ
ಇಷ್ಟೆಲ್ಲಾ ಬೆಳವಣಿಗೆ ನಡುವೆಯೂ ರಾಜ್ಯದ 25 ಸಂಸದರು ತುಟಿ ಬಿಚ್ಚಿಲ್ಲ. ಸಂಸತ್‍ನಲ್ಲಿ ಈ ಬಗ್ಗೆ ದನಿ ಎತ್ತುವ ಕೆಲಸ ಮಾಡಿಲ್ಲ. ಆದರೆ ಯಡಿಯೂರಪ್ಪ ಮಾತ್ರ, ನಾವು ಗಡಿ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಕನ್ನಡಪರ ಸಂಘಟನೆಗಳು ಬೆಂಗಳೂರು ಸೇರಿ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಗಾಂಧಿನಗರದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್‍ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷರ ಎದುರೇ ಕಾರ್ಯಕರ್ತರ ಕಿತ್ತಾಟ