ಹಾಸನ: ಜಿಲ್ಲಾ ಕಾಂಗ್ರೆಸ್‌ನಲ್ಲಿ (Congress) ಬಣ ರಾಜಕೀಯ ಹಾಗೂ ಭಿನ್ನಮತ ಮುಂದುವರಿದಿದೆ. ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಆರ್.ಧ್ರುವನಾರಾಯಣ್ (R Dhruvanarayana) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ಸಿಟ್ಟು ಹೊರ ಹಾಕಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಆರಂಭ ಆಗುತ್ತಿದ್ದಂತೆಯೇ ಮಾತನಾಡಿದ ಹಲವು ಮುಖಂಡರು, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದರು. ಜಿಲ್ಲಾ ನಾಯಕರು ಹಾಗೂ ಮುಖಂಡರ ಅಭಿಪ್ರಾಯ ಪಡೆಯದೆ ಇ.ಹೆಚ್.ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ನಾಯಕರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಪಸಂಖ್ಯಾತರ ಪರ ಮಾತನಾಡುವ ಸಿದ್ದರಾಮಯ್ಯ (Siddaramaiah) ಅವರನ್ನು ಬಿಜೆಪಿಯವರು (BJP) ಸಿದ್ರಾಮುಲ್ಲಾಖಾನ್ ಅಂತಾರೆ. ಅಂತಹ ಬಿಜೆಪಿಯಲ್ಲಿದ್ದವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ, ಇದರಲ್ಲೂ ಡೀಲ್ ಮಾಡಿಕೊಂಡ್ರಾ, ಬರೀ ಡೀಲ್ ನಿಮ್ದು ಎಂದು ಕೆಂಡಾಮಂಡಲರಾದರು.
Advertisement
Advertisement
ಇಪ್ಪತ್ತೈದು ವರ್ಷದಲ್ಲಿ ಉತ್ತಮ ಅಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ. ನಾಚಿಕೆ ಆಗಬೇಕು ನಿಮಗೆ, ನಿಮ್ಮ ಹತ್ರ ಹಣವಿರಬಹುದು, ನಾವಿಲ್ಲದಿದ್ದರೆ ನೀವು ಏನೂ ಮಾಡಲು ಆಗಲ್ಲ ಎಂದು ಬಹಿರಂಗ ಸಭೆಯಲ್ಲಿ ಸಿಟ್ಟಾದರು. ರಾಜ್ಯ ನಾಯಕರು ಪಕ್ಷದ ಹಿತದೃಷ್ಟಿ ಹಾಗೂ ಸಂಘಟನೆ ದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡಿರುತ್ತಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
Advertisement
Advertisement
ಇದಾದ ಬಳಿಕವೂ ಇದೇ ವಿಷಯವಾಗಿ ಅಸಮಾಧಾನ, ಗದ್ದಲ, ಗೊಂದಲ ಮುಂದುವರಿಯಿತು. ಒಬ್ಬರ ಪರ ಇನ್ನೊಬ್ಬರು ಮಾತನಾಡಿದ್ದರಿಂದ ಸಭೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ವಾಗ್ವಾದ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಕಾರ್ಯಕರ್ತರ ಗದ್ದಲ ನಿಯಂತ್ರಿಸಲಾಗದೆ ರಾಜ್ಯ ನಾಯಕರು ಮೂಕ ಪ್ರೇಕ್ಷಕರಾದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗಿದೆ ಎಂದು ಧ್ರುವನಾರಾಯಣ್ ಸಮ್ಮುಖದಲ್ಲೇ ಕೈಪಡೆ ಕಿತ್ತಾಡಿಕೊಂಡರು. ಇದನ್ನೂ ಓದಿ: ಅಫ್ತಾಬ್‌ನನ್ನು ಗಲ್ಲಿಗೇರಿಸಿ, ಪೋಷಕರಿಗೂ ಕಠಿಣ ಶಿಕ್ಷೆ ನೀಡಿ: ಶ್ರದ್ಧಾ ತಂದೆ ಆಕ್ರೋಶ
ಈ ನಡುವೆ ಬೇಲೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಾಜಿಸಚಿವ ಬಿ.ಶಿವರಾಂ ಪರವಾಗಿ ಮಾತನಾಡಲು ಮುಂದಾದವರ ವಿರುದ್ಧ ಅನೇಕರು ಕಿಡಿಕಾರಿದರು. ಶಿವರಾಂ ಪರವಾಗಿ ಮಾತನಾಡುತ್ತಿದ್ದವರ ಮೇಲೆ ಕೆಲವರು ಮುಗಿ ಬಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ವಾಗ್ವಾದ ನಡೆಸುತ್ತಿದ್ದವರನ್ನು ಸಭೆಯಿಂದ ಹೊರಕಳಿಸಿ ಉಳಿದ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು. ಆದರೂ ಸುಮ್ಮನಾಗದ ಕೆಲವರು, ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದರು. ನೀವು ಕೆಟ್ಟು ಕೆರ ಹಿಡಿದು ಹೋಗಿದ್ದೀರಿ. ಗೆದ್ದು ಆಗೋಯ್ತು, ಆಗಲೇ ಸರ್ಕಾರ ರಚನೆ ಮಾಡಲು ರೆಡಿ ಆಗಿದ್ದೀವಿ ಅನ್ಕೊಂಡಿದ್ದೀರಾ, ಇದೇ ರೀತಿ ಆದರೆ ಎಲ್ಲೂ ಗೆಲ್ಲಲು ಆಗಲ್ಲ ಎಂದು ಗುಡುಗಿದರು. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಪ್ರಣಾಳಿಕೆ ಸಂಬಂಧ ವಿಶ್ವನಾಥ್ ಜೊತೆ ಚರ್ಚೆ ಮಾಡಿದ್ದೇನೆ: ಡಿಕೆಶಿ