ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಜಬ್ ಗಾಗಿ ಹೋರಾಟ ಮುಂದುವರಿದಿದೆ. ನಗರದ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿಗೆ NSUI ಸಂಘಟನೆ ರಾಜ್ಯ ಸದಸ್ಯರು ಭೇಟಿ ಕೊಟ್ಟಿದ್ದಾರೆ.
ಎನ್‍ಎಸ್‍ಯುಐ ಸಂಘಟನೆ ಸದಸ್ಯರು ಬರುವಾಗ ಕಾಲೇಜಿಗೆ ಬಾಗಿಲು ಹಾಕಲಾಗಿದೆ. ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಪ್ರಾಂಶುಪಾಲರ ವಿರುದ್ಧ NSUI ಅಸಮಾಧಾನ ಹೊರಹಾಕಿದ್ದು, ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ. ವಿದ್ಯಾರ್ಥಿಗಳ ಧಾರ್ಮಿಕ ಶೈಕ್ಷಣಿಕ ಹಕ್ಕನ್ನು ಕಸಿಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಗೆ ಮನವಿ ನೀಡಿದ NSUI, ಹಿಜಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದೆ. ಈ ಘಟನೆಯಲ್ಲಿ NSUI ಯಾವುದೇ ರಾಜಕೀಯವನ್ನು ಮಾಡುವುದಿಲ್ಲ ರಾಜ್ಯ ಸರ್ಕಾರ ಎಲ್ಲರನ್ನು ಸಮಾನವಾಗಿ ಕಾಣಬೇಕು. ಈ ವಿಚಾರವನ್ನು ಶೀಘ್ರ ಪರಿಹರಿಸಬೇಕು. ವಿದ್ಯಾರ್ಥಿಗಳು 25 ದಿನಗಳಿಂದ ತರಗತಿಯಿಂದ ಹೊರಗೆ ಇರುವುದರಿಂದ ಅವರು ಶೈಕ್ಷಣಿಕವಾಗಿ ಬಹಳಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಯದಿದ್ದರೆ ಕಾಲೇಜಿನ ಕ್ಯಾಂಪಸ್ ನಲ್ಲಿ NSUI ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.
ಈ ದೇಶದ ಈ ನಾಡಿನ ಕಾನೂನನ್ನು ನಾವು ಗೌರವ ಮಾಡುತ್ತೇವೆ. ಸಂವಿಧಾನ ಏನು ಹೇಳಿದೆ ಅದರ ಪ್ರಕಾರವಾಗಿ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ ಶಾಲೆಯ ಆಡಳಿತ ಮಂಡಳಿಯ ಕರ್ತವ್ಯ. ವಿದ್ಯಾರ್ಥಿನಿಯರಿಗೆ ನ್ಯಾಯವನ್ನು ಒದಗಿಸಿ ಕೊಡುವ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು. ಇದನ್ನೂ ಓದಿ: ಹಿಜಬ್‌ಗಾಗಿ ಮುಂದುವರಿದ ಹೋರಾಟ
ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒತ್ತಡವನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ NSUI ಎಚ್ಚರಿಕೆ ಹೇಳಿದೆ. ಇಂದು ಬೆಳಗ್ಗೆ 11 ಗಂಟೆಗೆ ಭೇಟಿ ಮಾಡಿ ಚರ್ಚೆ ಮಾಡುವ ಅವಕಾಶವನ್ನು ನಾವು ಕೇಳಿದ್ದೆವು. ನಾವು ಬರುವ ವಿಚಾರವನ್ನು ತಿಳಿದು ಪ್ರಾಂಶುಪಾಲರು ಬಾಗಿಲು ಹಾಕಿದ್ದಾರೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿತು.