ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಗುಂಡಿಕ್ಕಿ ಕೊಲ್ಲಬೇಕು ಎಂಬ ವಿವಾದಾತ್ಮಕ ಹೇಳಿಕೆಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.
ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದರು. ಪ್ರಕರಣ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ನ್ಯಾ. ಕೃಷ್ಣದೀಕ್ಷಿತ್ ಪೀಠವು ಈ ಆದೇಶ ಹೊರಡಿಸಿದೆ.
ಆದರೂ, ಈಶ್ವರಪ್ಪ ಹೇಳಿಕೆಗೆ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ನಮ್ಮದು ಬಹು ಭಾಷಾ, ಧರ್ಮ ಇರುವ ದೇಶ. ಎಷ್ಟೋ ಕಡೆ ಸ್ವಲ್ಪ ಹೆಚ್ಚು ಕಡಿಮೆ ಮಾತನಾಡಿದ್ರೆ ಗಲಭೆ ಆಗುವ ಸನ್ನಿವೇಶ ಇದೆ. ಹೀಗುರುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕೋರ್ಟ್ ಸಲಹೆ ನೀಡಿದೆ.
ನಮ್ಮ ರಾಜಕೀಯ ನಾಯಕರು ಭಾಷೆಯ ಮೇಲೆ ದೌರ್ಜನ್ಯ ಮಾಡ್ತಾ ಇದ್ದಾರೆ. ನಾಯಕರ ಮಾತುಗಳನ್ನು ಮಕ್ಕಳು ನೋಡುತ್ತಾ ಇರ್ತಾರೆ. ಇದರಿಂದ ಮಕ್ಕಳು ಏನನ್ನು ಕಲಿಯುತ್ತಾರೆ? ಸಂಸ್ಕೃತಿ ಬಿಂಬಿಸುವಂತೆ ಮಾತನಾಡಲು ಹೇಳಿ. ನಿಮ್ಮ ಕಕ್ಷಿದಾರರಿಗೆ ನೀವೆ ಸಲಹೆ ನೀಡಿ ಎಂದು ಕೋರ್ಟ್ ಕಿವಿಮಾತು ಹೇಳಿದೆ.