ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ಹಾಗೂ ಜಾರಿ ನಿರ್ದೇಶನಾಲಯದ (ED) ತನಿಖೆಯ ನಡುವೆಯೇ, ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್(Shivashankarappa Sahukar) ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ಹೈಕೋರ್ಟ್ (High Court) ಏಕಸದಸ್ಯ ಪೀಠ ರದ್ದುಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟ ಯಾವುದೇ ಸಲಹೆ ಅಥವಾ ಶಿಫಾರಸು ಮಾಡಿರಲಿಲ್ಲ. ಸಂವಿಧಾನಬದ್ಧವಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನಷ್ಟೇ ಅನುಸರಿಸಬೇಕಿರುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜುಲೈ 10ರಂದು ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಮುಂದಿನ 7 ದಿನಗಳ ಒಳಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವಂತೆ ಆದೇಶಿಸಿದೆ.
ತಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಅಥವಾ ನಿರ್ಣಯಗಳಲ್ಲಿ ಭಾಗಿಯಾಗಬಾರದು ಹಾಗೂ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ನಿರ್ಬಂಧ ವಿಧಿಸಿದೆ.
ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಸರಿ-ತಪ್ಪುಗಳ ಬಗ್ಗೆ ತಾನು ಯಾವುದೇ ತೀರ್ಮಾನ ನೀಡಿಲ್ಲ. ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತ್ರ ಈ ಆದೇಶ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲೂ ಯಾರ ಮೇಲೂ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಮಾನತು ಪ್ರಕ್ರಿಯೆಯಲ್ಲಿದ್ದ ಲೋಪದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆಯೇ ಹೊರತು, ಆರೋಪಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಶಿವಶಂಕರಪ್ಪ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ ರಾಜ್ಯಾಪಾಲರ ನಿರ್ಧಾರ ಕಾನೂನುಬಾಹಿರ ಎಂದು ವಾದಿಸಿದ್ದರು.
