ಬೆಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್ (Electoral Bonds) ಪಡೆದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಬಿಜೆಪಿ ನಾಯಕರ ಮೇಲೆ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ (High Court) ರದ್ದುಗೊಳಿಸಿದೆ.
ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆರೋಪಗಳಿಗೆ ಸಾಕಷ್ಟು ಆಧಾರಗಳಿಲ್ಲದ ಕಾರಣ ಎಫ್‌ಐಆರ್ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ. ಈ ಮೊದಲು ಈ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತ್ತು.
ನಿರ್ಮಲಾ ಸೀತಾರಾಮನ್ ಸೇರಿ ಹಲವರು ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆದರ್ಶ್ ಐಯ್ಯರ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ದೂರುದಾರರ ಆದರ್ಶ್ ಐಯ್ಯರ್ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು. ಎಸ್‌ಐಟಿ ರಚಿಸಿ ಈ ಪ್ರಕರಣದ ತನಿಖೆ ಮಾಡಬೇಕಿದೆ. ಜನರನ್ನು ಬೆದರಿಸಿ ಹಣ ಕಬಳಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಸುಲಿಗೆ ಮಾಡಲು ಬಳಸಿಕೊಂಡಿದ್ದಾರೆ ಎಂದು ವಾದಿಸಿದ್ದರು.
ಪ್ರಕರಣದಲ್ಲಿ ನಿರ್ಮಾಲಾ ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದರೆ, ಇಡಿ ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್ ಕುಮಾರ್ ಕಟೀಲ್ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದರು. ಇದನ್ನೂ ಓದಿ: ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು
ದೂರು ಏನಿತ್ತು?
ಒತ್ತಡದ ತಂತ್ರವಾಗಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗಳನ್ನು ಉಲ್ಲೇಖಿಸಿ ಕಾರ್ಪೊರೇಟ್ ಸಂಸ್ಥೆಗಳು ಸಾವಿರಾರು ಕೋಟಿಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಒತ್ತಾಯಿಸಲಾಗಿದೆ ಈ ಎಲೆಕ್ಟೋರಲ್ ಬಾಂಡ್‌ಗಳನ್ನು ಬಿಜೆಪಿ ನಾಯಕರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಗದೀಕರಿಸಿದ್ದಾರೆ. ಚುನಾವಣಾ ಬಾಂಡ್‌ಗಳ ಯೋಜನೆಯು ರಾಜಕೀಯ ಉದ್ದೇಶಗಳಿಗಾಗಿ ಅಕ್ರಮ ಹಣವನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.