ಟಿಪ್ಪು ಜಯಂತಿ ರದ್ದು ಆದೇಶವನ್ನು ಪುನರ್ ಪರಿಶೀಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Public TV
3 Min Read
HIGHCOURT

– ಕಾನೂನು ಸುವ್ಯವಸ್ಥೆ ಕಾರಣ ಕೊಟ್ಟು ಜಯಂತಿ ರದ್ದು ಸಾಧ್ಯವೇ?
– ಜನವರಿ 3ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಟಿಪ್ಪು ಜಯಂತಿ ಸರ್ಕಾರಿ ಆಚರಣೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ರಾಜ್ಯ ಸರಕಾರ ಆದೇಶ ರದ್ದುಪಡಿಸಲು ಕೋರಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಾಧೀಶ ಎ. ಎಸ್.ಓಕ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

Tipu

ಈ ವೇಳೆ ಈ ಹಿಂದೆ ಪ್ರಕಟಿಸಿದ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಬಹುದು. ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಕೆಲಸ ಎಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯಪಟ್ಟು ಜನವರಿ 3ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದರು. ಈ ವೇಳೆ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ನಿರ್ಬಂಧವಿಲ್ಲ. ನವೆಂಬರ್ 10 ರಂದು ರಾಜ್ಯ ಸರ್ಕಾರ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

BJP celebrates its 35th foundation day

ಅರ್ಜಿದಾರರ ವಾದ ಏನಿತ್ತು?
ಜುಲೈ 7 ರಂದು ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಮಂತ್ರಿಮಂಡಲದಲ್ಲಿ ಬೇರೆ ಯಾವುದೇ ಸಚಿವರು ಇರಲಿಲ್ಲ. ಹೀಗಿದ್ದರೂ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಲಾಗಿದೆ. ಯಾವುದೇ ಸಚಿವರ ಅಭಿಪ್ರಾಯ ಪಡೆಯದೇ, ರಾಜ್ಯಪಾಲರ ಅಭಿಪ್ರಾಯ ಪಡೆಯದೇ, ಯಾರೊಬ್ಬರ ಅಭಿಪ್ರಾಯವನ್ನೂ ಪರಿಗಣಿಸದೆ ರದ್ದು ಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟೂ 28 ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ಜಯಂತಿಯನ್ನು ಸರ್ಕಾರವೇ ಅಚರಿಸುತ್ತದೆ. ಟಿಪ್ಪು ಜಯಂತಿ ರದ್ದುಪಡಿಸಿರುವುದು ದುರಂತವಾಗಿದ್ದು, ಸರ್ಕಾರದ ಈ ನಡೆಯಿಂದ ಜಾತಿ ತಾರತಮ್ಯ ನಡೆಸುತ್ತಿರುವುದು ಖಾತ್ರಿಯಾಗಿದೆ. ಇದು ಮುಸಲ್ಮಾನರ ವಿರುದ್ಧದ ತಾರತಮ್ಯ ನೀತಿಯನ್ನು ತೋರಿಸುತ್ತದೆ. ಸರ್ಕಾರ ಯಾವಾಗ ಬೇಕಾದರೂ ತನ್ನ ಕಾಯ್ದೆಗಳನ್ನು ಬದಲಿಸಿಕೊಳ್ಳಬಹುದಾದರೂ ಅದಕ್ಕೆ ಒಂದು ನೀತಿ ನಿಯಮವಿದೆ. ಆದರೆ ಏಕಾಏಕಿ ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.

tippu sultan

ವಿಚಾರಣೆ ಸಮಯದಲ್ಲಿ ರಾಜ್ಯದಲ್ಲಿ ಇಷ್ಟು ಜಯಂತಿಗಳನ್ನು ಆಚರಿಸಲು ಕಾರಣ ಏನು ಎಂದು ಸಿಜೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಲ್ಲಿ ಪ್ರಶ್ನಿಸಿದರು. ರಾಜ್ಯದಲ್ಲಿ ಸ್ನೇಹತಾ ಮನೋಭಾವ, ಒಗ್ಗೂಡುವಿಕೆ, ಒಬ್ಬರನೊಬ್ಬರು ಅರಿತು ಬಾಳಲು ಆಚರಿಸಲಾಗುತ್ತಿದೆ ಎಂದು ಉತ್ತರ ನೀಡಿದರು. ಈ ಉತ್ತರ ಬಂದ ಕೂಡಲೇ ಹಾಗಾದ್ರೆ ಟಿಪ್ಪು ಜಯಂತಿ ವಿಚಾರದಲ್ಲಿ ಎಂದು ಮರು ಪ್ರಶ್ನೆ ಹಾಕಿದಾಗ ಕೊಡಗಿನ ಒಂದು ಭಾಗದಲ್ಲಿ ತೀವ್ರ ಸಮಸ್ಯೆಯಾಯಿತು. ಗುಂಪು ಘರ್ಷಣೆ ನಡೆಯಿತು, ಓರ್ವನ ಹತ್ಯೆಯಾಯಿತು ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ಹಿಂಪಡೆದ ಕಾರಣದಿಂದಾಗಿ ಅರ್ಜಿದಾರರ ಯಾವ ಹಕ್ಕು ಮೊಟುಕುಗೊಂಡಂತಾಗಿದೆ ಅಡ್ವೊಕೇಟ್ ಜನರಲ್ ಪ್ರಶ್ನೆ ಕೇಳಿದರು.

karnataka high court

ರಾಜ್ಯೋತ್ಸವ ವಿಚಾರದಲ್ಲೂ ಗಲಭೆಗಳಾಗಿವೆ. ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಬೇಕು. ಕಾನೂನು ಸುವ್ಯವಸ್ಥೆ ಕಾರಣಗಳಿಂದ ರದ್ದುಪಡಿಸಲು ಸಾಧ್ಯವೇ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನೆ ಕೇಳಿದರು. ಈ ಪ್ರಕರಣ ಸಾರ್ವಜನಿಕ ಹಿತಾಸಕ್ತಿ ವಿಚಾರವಾಗಿದೆ. ಅಡ್ವೊಕೇಟ್ ಜನರಲ್ ಹೇಳಿದನ್ನು ನಾವು ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

TIPPU BJP

ಕೊನೆಯಲ್ಲಿ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡಲೇ ಕ್ರಮವಹಿಸಬೇಕು. ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಸರ್ಕಾರ ಮಾಡಬೇಕು. ನಿಯಮ ಬದಲಾವಣೆಯನ್ನು ಸರ್ಕಾರ ಕ್ರಮೇಣವಾಗಿ ಮಾಡಬೇಕು. ಸುಪ್ರೀಂ ಕೋರ್ಟ್ ಪ್ರಕರಣವೊಂದರ ತೀರ್ಪು ನೀಡುವಾಗ ಇದನ್ನು ಪರಿಗಣಿಸಲು ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಬಹುದು ಅಥವಾ ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಜ.3ಕ್ಕೆ ಮುಂದೂಡಿತು.

Share This Article
Leave a Comment

Leave a Reply

Your email address will not be published. Required fields are marked *