ಕೊಪ್ಪಳ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಮಾತಿನಲ್ಲಿ ನಿಜ ಇದೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದರು.
ಕೊಪ್ಪಳದ (Koppala) ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಸರ್ಕಾರದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂಬ ಶಾಮನೂರು ಶಿವಶಂಕರಪ್ಪ (Shamanoor Shivashankarappa) ಹೇಳಿಕೆ ಸತ್ಯವಿದೆ ಎಂದರು. ಇದನ್ನೂ ಓದಿ: ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು: ಶಾಮನೂರು ಕಿಡಿ
ನನಗೂ ಹಲವು ಐಎಎಸ್-ಐಪಿಎಸ್ ಅಧಿಕಾರಿಗಳು ಫೋನ್ ಮಾಡಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಅಧಿಕಾರಿಗಳ ವರ್ಗಾವಣೆ ಹಾಗೂ ಆಡಳಿತ ವಿಚಾರದಲ್ಲಿ ತಲೆ ಹಾಕಲ್ಲ. ನಮಗೆ 2ಎ ಮೀಸಲಾತಿ ನೀಡಿದರೆ ಸಾಕು. ಇಂಥ ನೂರು ಅಧಿಕಾರಿಗಳನ್ನ ತಯಾರು ಮಾಡುತ್ತೇವೆ. ಈ ಕಾರಣಕ್ಕೆ ಸಾಕಷ್ಟು ನೋವಿದ್ದರೂ ಬಹಿರಂಗವಾಗಿ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.
ಎಲ್ಲ ಲಿಂಗಾಯತ ಶಾಸಕರ ಧ್ವನಿಯಾಗಿ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿದ್ದಾರೆ. ಆ ಧ್ವನಿ ನಿಭಾಯಿಸುವ ಕೆಲಸವನ್ನ ಸರ್ಕಾರ ಮಾಡಬೇಕಿದೆ. ಶಾಮನೂರ ಮಾತನಾಡಿದ ಮಾದರಿಯಲ್ಲೇ ನಮ್ಮ ಇನ್ನುಳಿದ ಸಚಿವರು ಮತ್ತು ಶಾಸಕರು ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೆಟ್ಟರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ; ವೀರಶೈವ ಮಹಾಸಭಾದಿಂದ ಸಿಎಂಗೆ ಪತ್ರ
ಆಗ ಮಾತ್ರ ವ್ಯವಸ್ಥೆ ಸರಿ ಆಗುತ್ತದೆ. ಲಿಂಗಾಯತ ಸಮುದಾಯದ ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ಒಳ್ಳೆಯ ಸ್ಥಾನ ನೀಡಲಿ. ನಿಷ್ಕ್ರಿಯ ಅಧಿಕಾರಿಗಳ ವಿರುದ್ಧ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಲಿ. ನನ್ನ ಸಮಾಜದ ನೋವು ನನ್ನ ನೋವೂ ಹೌದು. ಆದರೆ ನಾನು ಹೇಳಿಕೊಂಡಿರಲಿಲ್ಲ. ನಮಗೆ 2ಎ ಬೇಕಾಗಿದೆ. ಅದಕ್ಕೆ ಎಲ್ಲ ಸಹಿಸಿಕೊಂಡಿದ್ದೇವೆ ಎಂದು ತಿಳಿಸಿದರು..
Web Stories