ಬೆಂಗಳೂರು: ತೀವ್ರ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸುಮಾರು 46 ರಿಂದ 50 ಲಕ್ಷ ರೈತರಿಗೆ(Farmer) ತಲಾ 2,500 ರೂಪಾಯಿಗಳ ಇನ್‌ಪುಟ್ ಸಬ್ಸಿಡಿ ನೀಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್(Parameshwara) ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಬರ ಪರಿಸ್ಥಿತಿಯ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವರು, ಈ ಐತಿಹಾಸಿಕ ಬರಗಾಲದಲ್ಲಿ(Karnataka Drought) ಸರ್ಕಾರ ಸಂಪೂರ್ಣವಾಗಿ ರೈತರ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಈ ತೀರ್ಮಾನವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇದಕ್ಕಾಗಿ ಸರ್ಕಾರ 1,250 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದರು.
ಕೇವಲ ಯಾರೋ ಪ್ರತಿಭಟನೆ ನಡೆಸಿದರು ಅಥವಾ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದರು ಎಂಬ ಕಾರಣಕ್ಕೆ ಸರ್ಕಾರ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿಲ್ಲ. ಕೇಂದ್ರ ಸರ್ಕಾರದ ನಿಗದಿತ ಮಾರ್ಗಸೂಚಿ ಮತ್ತು ಮಾನದಂಡಗಳಿಗೆ ಒಳಪಟ್ಟ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಇಂಥದ್ದೇ ತಾಲೂಕುಗಳನ್ನು ಸೇರಿಸಬೇಕೆಂದು ನಾವು ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಒಂದು ವೇಳೆ ಒತ್ತಡ ಹೇರಿರುವುದು ಸಾಬೀತಾದರೆ ಯಾವುದೇ ಶಿಕ್ಷೆಗೂ ಸಿದ್ಧ. ಇನ್ನೂ ಕೆಲವು ಅರ್ಹ ತಾಲೂಕುಗಳ ಪಟ್ಟಿ ಪರಿಶೀಲನೆಯಲ್ಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 40 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಹೀಗಾಗಿ ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಕೋರಲು ಶೀಘ್ರದಲ್ಲೇ ನಿಯೋಗದೊಂದಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಪಕ್ಷಗಳ ಹೆಲಿಕಾಪ್ಟರ್ ವೀಕ್ಷಣೆ ಟೀಕೆಗೆ ಉತ್ತರಿಸಿದ ಅವರು, ನಾವು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದು ನಿಜ. ಆದರೆ ಆಕಾಶದಲ್ಲೇ ಕುಳಿತು ಬರ ವೀಕ್ಷಣೆ ಮಾಡಿಲ್ಲ. ಹೆಲಿಕಾಪ್ಟರ್‌ನಿಂದ ಕೆಳಕ್ಕಿಳಿದು, ಸ್ವತಃ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ,ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ದಾಖಲೆ ಪ್ರಮಾಣದ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ವಿಮೆ ಯೋಜನೆಯಡಿ ರಾಜ್ಯ ಸರ್ಕಾರದ ಪಾಲಿನ 1,242 ಕೋಟಿ ರೂ. ಮೊತ್ತವನ್ನು ಸರ್ಕಾರ ಒದಗಿಸಲಿದೆ. 16ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಎಸ್‌ಡಿಆರ್‌ಎಫ್‌ನಿಂದ 922 ಕೋಟಿ ರೂ. ಬರಬೇಕಿದ್ದು, ಈವರೆಗೆ 446 ಕೋಟಿ ರೂ. ಬಂದಿದೆ. ಬಾಕಿ ಮೊತ್ತ ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದಲ್ಲಿ ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ರಾಜ್ಯದ ಹಣಕಾಸು ಸ್ಥಿತಿಯನ್ನು ಎಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಆರ್ಥಿಕ ಶಿಸ್ತಿನಿಂದ ನಿರ್ವಹಿಸುತ್ತಿದ್ದೇವೆ. ಇಲ್ಲದಿದ್ದರೆ ರಾಜ್ಯ ದಿವಾಳಿಯಾಗುವ ಅಪಾಯವಿರುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಆರ್ಥಿಕ ಶಿಸ್ತು ಉತ್ತಮವಾಗಿದ್ದು, ಜನರ ಹಿತದೃಷ್ಟಿಯಿಂದ ಗ್ಯಾರಂಟಿ ಸೇರಿದಂತೆ ಎಲ್ಲಾ ಭರವಸೆಗಳನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ ಎಂದು ಹೇಳಿದರು.

