ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿದ್ದ ಸಂಘರ್ಷ ಈಗ ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದೆ. ಮುಸ್ಲಿಮ್ (Muslims) ಸಮುದಾಯದ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ಕಲ್ಪಿಸಿದ್ದ ಮಸೂದೆಯನ್ನು ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ (Thawar Chand Gehlot) ಅವರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಕಳುಹಿಸಿದ ಪತ್ರದಲ್ಲಿ ರಾಜ್ಯಪಾಲರು ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ (Religion Based Reservation) ನೀಡಲು ಅವಕಾಶವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿದೆ. ಸಂವಿಧಾನದ ಆರ್ಟಿಕಲ್ 14,15,16 ಉಲ್ಲೇಖಸಿ ನಿರಾಕರಣೆ ಮಾಡಿದೆ ಎಂದು ಕೆಲ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಮುಸ್ಲಿಮರು ಹಿಂದೂ ಮಂಡಳಿಗಳ ಭಾಗವಾಗಲು ಅವಕಾಶ ನೀಡುತ್ತೀರಾ – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಗುತ್ತಿಗೆ ಮೀಸಲಾತಿಯು ಈವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ 1ರವರೆಗೆ ಅನ್ವಯವಾಗುತ್ತಿತ್ತು. ಈ ಸೌಲಭ್ಯವನ್ನು ಮುಸ್ಲಿಮರಿಗೆ (ಪ್ರವರ್ಗ 2–ಬಿ) ವಿಸ್ತರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಇದನ್ನೂ ಓದಿ: ವಕ್ಫ್ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್ ಹಾಕುತ್ತಿರಲಿಲ್ಲ: ಮೋದಿ
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾರ್ಚ್ 7ರಂದು ಮಂಡಿಸಿದ ಬಜೆಟ್‌ನಲ್ಲಿ ಮೀಸಲಾತಿ ನೀಡುವ ಬಗ್ಗೆ ಘೋಷಣೆ ಮಾಡಿದ್ದರು. ವಿಪಕ್ಷಗಳ ವಿರೋಧದ ಮಧ್ಯೆ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ ನೀಡಿತ್ತು.
ಮಸೂದೆ ಕಾಯ್ದೆಯಾಗಿ ಜಾರಿಯಾದರೆ 2 ಕೋಟಿ ರೂ. ವೆಚ್ಚದ ಕಾಮಗಾರಿಗಳು, 1 ಕೋಟಿ ರೂ.ವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಸಿಗಲಿದೆ.