ಬೆಂಗಳೂರು: ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡುವುದಾಗಿ ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಹೆಬ್ಬಾಳ, ಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ನಿರ್ಮಿಸಿರುವ ಬೀಜ ಭವನದಲ್ಲಿ ಮಾರಾಟ ಭವನ ಕಟ್ಟಡ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣಭೈರೇಗೌಡ ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
Advertisement
Advertisement
ರೈತರಿಗೆ ನಮ್ಮ ಸರ್ಕಾರ ಬಂದ ಮೇಲೆ ಅಗತ್ಯ ಬಿತ್ತನೆ ಬೀಜಗಳನ್ನ ನೀಡಿದ್ದೇವೆ. ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಬಿತ್ತನೆ ಬೀಜ ನೀಡದೇ ಗಲಾಟೆಗಳಾಗಿ ರೈತರು ಸತ್ತಿದ್ದಾರೆ. ಆದರೆ ನಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ರೈತರಿಗೆ ಮುಂದಿನ 3 ವರ್ಷಗಳ ಕಾಲ ಉತ್ತಮ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ ಮಾಡಿಕೊಂಡಿದೆ. ಇನ್ಮುಂದೆ ರೈತರಿಗೆ ಈ ವರ್ಷದಿಂದಲೇ ಎ ದರ್ಜೆಯ ಬೀಜ ಮಾತ್ರ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಎರಡನೇ ದರ್ಜೆಯ ಬೀಜ ರೈತರಿಗೆ ನೀಡದಿರಲು ಸೂಚನೆಯನ್ನು ನೀಡಲಾಗಿದೆ.
Advertisement
ಬೀಜ ಕಂಪನಿಗಳು, ಬೀಜ ನಿಗಮ ವಿಶ್ವವಿದ್ಯಾಲಯಗಳು ಜೊತೆ ಮಾತುಕತೆಯಾಗಿದೆ. ಎ ದರ್ಜೆ ಬಿತ್ತನೆ ಬೀಜ ನೀಡಲು ನಿಯಮ ರೂಪಿಸಿದ ಮೊದಲ ಸರ್ಕಾರ ನಮ್ಮದು ಎಂದು ಕೃಷ್ಣಭೈರೇಗೌಡರು ಹೇಳಿಕೆ ನೀಡಿದರು.
Advertisement
ಪುಷ್ಪೋದ್ಯಮದಲ್ಲಿ ನಮ್ಮ ರಾಜ್ಯ ಅತ್ಯಂತ ಮುಂಚೂಣಿಯಲ್ಲಿದೆ. 2000 ರಿಂದ ಇಲ್ಲಿಯವರೆಗೂ ನಿತ್ಯ ಪುಷ್ಪ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಭಾರತದಲ್ಲೇ ಮೊದಲ ಪುಷ್ಪ ಹರಾಜು ಕೇಂದ್ರ ನಮ್ಮದು. ಏಷ್ಯಾದಲ್ಲಿ ಜಪಾನ್ ಬಿಟ್ಟರೆ ಎರಡನೇ ಸ್ಥಾನ, ನಮ್ಮ ಪುಷ್ಪ ಹರಾಜು ಕೇಂದ್ರ. ಪುಷ್ಪ ವಾಣಿಜ್ಯ ಉದ್ಯಮವನ್ನ ಉನ್ನತೀಕರಿಸಲು ಪುಷ್ಪ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ ಎಂದರು.
ದೇಶದಲ್ಲೇ ಅತಿ ಹೆಚ್ಚು ಪುಷ್ಪ ಬೆಳೆಯುವ ರಾಜ್ಯ ಕರ್ನಾಟಕ. ಪುಷ್ಪೋದ್ಯಮ ಕ್ಷೇತ್ರದಲ್ಲಿ ದೇಶಕ್ಕೆ ಕರ್ನಾಟಕ ನಂಬರ್ ಒನ್. 2006-07 ರಿಂದ ಹಾಲೆಂಡ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದೇವೆ. ಜನವರಿಯಿಂದ ಎಪಿಎಂಸಿಗಳಂತೆ ಪುಷ್ಪ ಹರಾಜಿಗೆ ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆಂದು ಕೃಷ್ಣಭೈರೇಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ವತಿಯಿಂದ ಅತ್ಯಾಧುನಿಕ 7 ಅಂತಸ್ತಿನ ಬೀಜ ಭವನ ನೂತನ ಕಟ್ಟಡವನ್ನು ಒಂದು ಎಕರೆ ಜಾಗದಲ್ಲಿ, 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಉದ್ಘಾಟಿಸಿದರು.