ಬೆಂಗಳೂರು: ರಾಜ್ಯದಲ್ಲಿ ರಣಭೀಕರ ಬರ ಇದ್ದರೂ ಸಮರ್ಪಕವಾಗಿ ನಿಭಾಯಿಸದ ಆಡಳಿತ-ವಿಪಕ್ಷ, ರಾಜ್ಯ-ಕೇಂದ್ರ ಅಂತ ಹೇಳಿ ಸರ್ಕಾರ-ಜನಪ್ರತಿನಿಧಿಗಳು ಕೆಸರೆರಚಾಟದಲ್ಲೇ ಕಾಲಕಳೆದ್ರು. ವಿಪಕ್ಷಗಳು ಮಳೆಗಾಲದ ಆರಂಭದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡು ನಗೆಪಾಟಲಿಗೀಡಾದ್ರೆ, ಈಗ ಸರ್ಕಾರ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪರ್ಜನ್ಯ ಹೋಮ ನಡೆಸಲು ಮುಂದಾಗಿದೆ.
ಅದರಲ್ಲೂ ಮೌಢ್ಯ ವಿರೋಧಿ ಅಂತ ಹೇಳೋ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳ ಪಂಡಿತರನ್ನ ಕರೆಸಿ ನೀರಾವರಿ ನಿಗಮ ಹೋಮ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಜೀವನದಿಗಳಾದ ಉತ್ತರದ ಕೃಷ್ಣಾನದಿ ಮೂಲದ ಮಹಾಬಲೇಶ್ವರದಲ್ಲಿ ಶುಕ್ರವಾರ, ದಕ್ಷಿಣದ ಕಾವೇರಿ ನದಿಮೂಲ ಭಾಗಮಂಡಲದಲ್ಲಿ ಶನಿವಾರ ಪರ್ಜನ್ಯ ಹೋಮ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಎರಡೂ ಕಡೆ 20 ಲಕ್ಷ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ.
ಟಿಆರ್‍ಪಿಗಾಗಿ ಮಾಡ್ತಿದ್ದೀರಿ: ಪರ್ಜನ್ಯ ಹೋಮ ಮಾಡ್ತಿರೋದ್ರ ಬಗ್ಗೆ ಸಂಜೆ 5 ಗಂಟೆ ನ್ಯೂಸ್‍ನಲ್ಲಿ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿತು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಸರ್ಕಾರದ ನಡೆಯನ್ನ ಬಲವಾಗಿ ಸಮರ್ಥಿಸಿಕೊಂಡು, ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ, ಟಿಆರ್‍ಪಿಗಾಗಿ ನೀವಿದನ್ನು ವಿವಾದ ಮಾಡ್ತಿದ್ದೀರಾ ಅಂದ್ರು. ಅಷ್ಟೇ ಅಲ್ಲ, ಇಂಥದ್ದನ್ನ ಕಡಿವಾಣ ಹಾಕೋಕೆ ಸದನ ಸಮಿತಿ ಮಾಡ್ತಿದ್ದೀವಿ ಅಂತ ಹೇಳಿದರು.
ಈ ಸಂಬಂಧ ಫೇಸ್‍ಬುಕ್‍ನಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಎಂಬಿ ಪಾಟೀಲ್, ನಗರೀಕರಣದ ಪರಿಣಾಮದಿಂದಾಗಿ ಕರ್ನಾಟಕ ಭೀಕರ ಬರವನ್ನು ಎದುರಿಸುತ್ತಿದೆ. ಹೀಗಾಗಿ ರೈತರ ಸಲಹೆಯ ಮೇರೆಗೆ ನಾವು ಪೂಜೆಯನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪೂಜೆಗೆ ಆಗಮಿಸಬೇಕೆಂದು ಅವರು ಕೇಳೀಕೊಂಡಿದ್ದಾರೆ.
ನಾವು ನಂಬಲ್ಲ: ಮಳೆಗಾಗಿ ಪರ್ಜನ್ಯ ಹೋಮದ ಮೂಲಕ ಮೌಢ್ಯ ಆಚರಣೆ ಮಾಡ್ತಿರೋ ಸಿಎಂ, ನಾವಿದನ್ನೆಲ್ಲಾ ನಂಬೋದಿಲ್ಲ ಅಂತ ಬೆಂಗಳೂರಿನಲ್ಲಿ ರಾಗ ಎಳೆದಿದ್ದಾರೆ. ವಿಕಾಸಸೌಧದಲ್ಲಿ ಮಕ್ಕಳ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ, ಸಂಬಂಧಪಟ್ಟಂತೆ ಸಂವಾದ ನಡೆಸಿದ್ರು.
ಈ ವೇಳೆ, ಸಿಎಂಗೆ ಮಕ್ಕಳು ಪ್ರಶ್ನೆಗಳ ಸುರಿಮಳೆ ಎದುರಾಯ್ತು. ಅದರಲ್ಲಿ ಗಮನ ಸೆಳೆದಿದ್ದು, ವಾಮಾಚಾರ, ಮೂಢನಂಬಿಕೆ ಹೆಸರಲ್ಲಿ ಮಕ್ಕಳ ಬಲಿ. ಇದರ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಅಂತ ರಾಮನಗರದ ವಿದ್ಯಾರ್ಥಿನಿ ಅಮೂಲ್ಯ ಪ್ರಶ್ನಿಸಿದ್ರು.
ಉತ್ತರ ಕೊಟ್ಟ ಸಿಎಂ, ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಿದೆ. ಮೌಢ್ಯದ ವಿರುದ್ಧ ಕಾನೂನಿಗೆ ಚಿಂತನೆ ನಡೆದಿದೆ ಅಂದ್ರು. ತಮ್ಮ ಕಾರಿನ ಮೇಲೆ ಕಾಗೆ ಕೂತದ್ದು, ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟದ್ದು ಎಲ್ಲವನ್ನೂ ಉದಾಹರಣೆ ಸಹಿತ ವಿವರಿಸಿದ್ರು. ಇದೇ ವೇಳೆ, ನಾನು ಮೊದಲು ಸಿಗರೇಟ್ ಸೇದ್ತಿದೆ. ಸಮಸ್ಯೆ ಆದ ಕಾರಣ ಬಿಟ್ಟುಬಿಟ್ಟೆ ಅಂತ ಹೇಳಿದ್ರು. ಇನ್ನು, ತಂದೆ ಸಾಲತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ ಅಂತ ನೋವು ತೋಡಿಕೊಂಡ ರೈತನ ಮಗನಿಗೆ 5 ಲಕ್ಷ ಕೊಡುವಂತೆ ಸಿಎಂ ಸೂಚಿಸಿದ್ರು.
ಪಬ್ಲಿಕ್ ಟಿವಿಗೆ ನೀರಾವರಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ.