ಬೆಂಗಳೂರು: ಮೈಸೂರ್ ಪಾಕ್ ಭೌಗೋಳಿಕ ಸೂಚ್ಯಂಕಕ್ಕಾಗಿ(ಜಿಐ) ಕರ್ನಾಟಕ ಮತ್ತು ತಮಿಳುನಾಡು ಮಂದಿ ಈಗ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಚರ್ಚೆ ನಡೆಸುತ್ತಿದ್ದರೆ, ರಾಜ್ಯ ಸರ್ಕಾರ ಸದ್ದಿಲ್ಲದೇ ನಿಂಬೆಹಣ್ಣಿನ ಜಿಯೋಗ್ರಫಿಕಲ್ ಐಡೆಂಟಿಫಿಕೇಷನ್ ಪಡೆಯಲು ಸಿದ್ಧತೆ ನಡೆಸುತ್ತಿದೆ.
ಹೌದು, ಕರ್ನಾಟಕ ಸರ್ಕಾರ ವಿಜಯಪುರದ ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ವಿಶೇಷ ನಿಂಬೆಹಣ್ಣಿನ ಜಿಐ ಮಾನ್ಯತೆ ಪಡೆಯಲು ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ಈ ಪ್ರಯತ್ನ ಸಫಲವಾದರೆ ಮಣಿಪುರದ ಕಚಯ್ ಬಳಿಕ ನಿಂಬೆಹಣ್ಣಿನ ಜಿಐ ಪಡೆದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
Advertisement
ತೋಟಗಾರಿಕಾ ವಿಜ್ಞಾನಿಗಳು, ಸಸ್ಯಶಾಸ್ತ್ರಜ್ಞರು, ಹಣ್ಣಿನ ತಜ್ಞರ ತಂಡವೊಂದು ನಿಂಬೆ ಹಣ್ಣು ಮತ್ತು ಅದರಲ್ಲಿನ ಅಪರೂಪದ ಗುಣಗಳನ್ನು ಈಗ ಅಧ್ಯಯನ ಮಾಡಲು ಸಿದ್ಧತೆ ನಡೆಸುತ್ತಿದೆ.
Advertisement
Advertisement
ಇಂಡಿ ನಿಂಬೆಹಣ್ಣಿನ ವಿಶೇಷತೆ ಏನು?
ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣಲ್ಲಿ ರಸ ಹೆಚ್ಚು. ವಾರಗಟ್ಟಲೆ ಇಟ್ಟರೂ ಒಣಗುವುದಿಲ್ಲ ಮತ್ತು ಹಾಳಾಗುವುದಿಲ್ಲ. ಈ ನಿಂಬೆಯನ್ನು ಬೇರೆ ಕಡೆ ಬೆಳೆದರೂ ಇಲ್ಲಿನ ಗುಣಮಟ್ಟ, ವಿಶೇಷತೆ ಇರುವುದಿಲ್ಲ. ಈ ಪರಿಸರದ ಮಣ್ಣು ಮತ್ತು ಹವಾಗುಣದಿಂದ ಗುಣಮಟ್ಟದ ನಿಂಬೆ ಬೆಳೆಯಲಾಗುತ್ತಿದ್ದು, ಈ ವಿಶೇಷತೆಯನ್ನು ಇಟ್ಟುಕೊಂಡು ಸರ್ಕಾರ ಈಗ ಜಿಐ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುತ್ತಿದೆ.
Advertisement
ಭಾರತ ನಿಂಬೆ ಉತ್ಪಾದನೆಯಲ್ಲಿ ವಿಶ್ವದಲ್ಲೇ 3ನೇ ಸ್ಥಾನ ಪಡೆದಿದ್ದು, 25 ದೇಶಗಳಿಗೆ ರಫ್ತಾಗುತ್ತಿದೆ. ಕರ್ನಾಟಕದ ಒಟ್ಟು 12,357 ಹೆಕ್ಟೇರ್ ನಿಂಬೆ ಪ್ರದೇಶದಲ್ಲಿ ವಿಜಯಪುರ ಜಿಲ್ಲೆಯಲ್ಲೇ 6,814 ಹೆಕ್ಟೇರ್ (ರಾಜ್ಯ ವಿಸ್ತೀರ್ಣದ ಶೇ.55ರಷ್ಟು) ಇದೆ. ಜಿಲ್ಲೆಯ ಇಂಡಿ ತಾಲೂಕಿನಲ್ಲಿ 3,994 ಹೆಕ್ಟೇರ್, ಸಿಂದಗಿ 1,056 ಹೆಕ್ಟೇರ್, ವಿಜಯಪುರದಲ್ಲಿ 1,055 ಹೆಕ್ಟೇರ್, ಬಸವನಬಾಗೇವಾಡಿ 741 ಹೆಕ್ಟೇರ್, ಮುದ್ದೇಬಿಹಾಳ ತಾಲೂಕಲ್ಲಿ 13 ಹೆಕ್ಟೇರ್ ನಲ್ಲಿ ನಿಂಬೆ ಬೆಳೆಯಿದೆ.
ಇಂಡಿಯಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ತೋಟಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಒಟ್ಟ ಇಂಡಿ ತಾಲೂಕು ಒಂದರಲ್ಲೇ ಪ್ರತಿ ವರ್ಷ ಹತ್ತಿರ ಹತ್ತಿರ 2 ಲಕ್ಷ ಟನ್ ನಿಂಬೆಹಣ್ಣನ್ನು ಬೆಳೆಯಲಾಗುತ್ತಿದೆ. ಪ್ರತಿ ವಾರ ಇಂಡಿಯಿಂದ 80 ರಿಂದ 100 ಟನ್ ನಿಂಬೆ ಹಣ್ಣನ್ನು ಮಧ್ಯಪೂರ್ವ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಜಮ್ಮು ಕಾಶ್ಮೀರಕ್ಕೆ ಇಂಡಿ ನಿಂಬೆ ಹಣ್ಣು ರಫ್ತು ಆಗುತ್ತದೆ.
ಕರ್ನಾಟಕದಲ್ಲಿ ಯಾವುದಕ್ಕೆ ಜಿಐ ಸಿಕ್ಕಿದೆ?
ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು, ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದ ಎಲೆ, ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಮೊಳಕಾಲ್ಮುರು ಸೀರೆಗಳು, ಮಲಬಾರ್ ಅರಾಬಿಕಾ ಕಾಫಿ, ಮಲಬಾರ್ ರೋಬಸ್ಟಾ ಕಾಫಿ, ಕೊಡಗು ಹಸಿರು ಏಲಕ್ಕಿ, ಧಾರವಾಡ ಪೇಡಾ, ದೇವನಹಳ್ಳಿ ಚಕ್ಕೊತ್ತಾ, ಅಪ್ಪೆಮಿಡಿ ಮಾವು, ಕಮಲಾಪುರ ಕೆಂಪು ಬಾಳೆಹಣ್ಣು, ಚನ್ನಪಟ್ಟಣದ ಗೊಂಬೆ, ಇಳಕಲ್ ಸೀರೆಗಳು ಸೇರಿದಂತೆ ರಾಜ್ಯದ 40 ಉತ್ಪನ್ನಗಳಿಗೆ ಜಿಐ ಮಾನ್ಯತೆ ಸಿಕ್ಕಿದೆ.
ಅತಿ ಹೆಚ್ಚು ಜಿಐ ಮಾನ್ಯತೆ ಪಡೆದ ರಾಜ್ಯಗಳು?
ರಾಜ್ಯಗಳ ಪ್ರಸ್ತಾಪವನ್ನು ಒಪ್ಪಿ ಕೇಂದ್ರ ಸರ್ಕಾರ ಜಿಯೋಗ್ರಫಿಕಲ್ ಐಡೆಂಟಿಫಿಕೇಷನ್ ಮಾನ್ಯತೆಯನ್ನು ನೀಡುತ್ತದೆ. ಪಟ್ಟಿಯಲ್ಲಿ 40 ಉತ್ಪನ್ನಗಳಿಗೆ ಮಾನ್ಯತೆ ಪಡೆಯುವ ಮೂಲಕ ಅತಿ ಹೆಚ್ಚು ಜಿಐ ಸಂಪಾದಿಸಿದ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದುಕೊಂಡಿದೆ. ರಾಜ್ಯಕ್ಕೆ ಸಿಕ್ಕಿರುವ 40ರಲ್ಲಿ 13 ಮೈಸೂರಿನಿಂದ ಬಂದಿರುವ ಉತ್ಪನಗಳು ಎನ್ನುವುದು ವಿಶೇಷ.
ಕರ್ನಾಟಕದ ಬಳಿಕ ಮಹಾರಾಷ್ಟ್ರ(30), ಕೇರಳ(27), ಉತ್ತರ ಪ್ರದೇಶ(24), ಆಂಧ್ರಪ್ರದೇಶ(18), ಪಶ್ಚಿಮ ಬಂಗಾಳ(15), ಒಡಿಶಾ(14), ರಾಜಸ್ಥಾನ(14), ಗುಜರಾತ್(13), ಬಿಹಾರ(11), ತೆಲಂಗಾಣ(11), ಅಸ್ಸಾಂ(8), ಮಧ್ಯಪ್ರದೇಶ(8), ಜಮ್ಮು ಕಾಶ್ಮೀರ(8) ರಾಜ್ಯಗಳ ಉತ್ಪನ್ನಗಳಿಗೆ ಜಿಐ ಸಿಕ್ಕಿದೆ.
ಇದನ್ನೂ ಓದಿ: ಮೈಸೂರು ಪಾಕ್ ಯಾರಿಗೆ ಸೇರಿದ್ದು? ಕನ್ನಡಿಗರು- ತಮಿಳಿಗರ ಮಧ್ಯೆ ಚರ್ಚೆ ಆರಂಭ