ಗದಗ: ರಾಜ್ಯದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು, ಸರ್ಕಾರ ಮುಂಚಿತವಾಗಿ ಸ್ಟಾಕ್ ಮಾಡಬೇಕಿತ್ತು. ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಜಿಲ್ಲೆಯ ಸೊರಟೂರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೆಚ್ಚಿನ ಗೊಬ್ಬರ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದೆ. ಕೇಂದ್ರ ಕೃಷಿ ಸಚಿವರ ಜೊತೆ ಮಾತನಾಡಿ ಕೊಡಿಸುವಂತಹ ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿದ್ದ ಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ಸರ್ಕಾರ ಪೂರೈಕೆ ಮಾಡಲಿ ಎಂದರು.ಇದನ್ನೂ ಓದಿ: ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ
ಇನ್ನೂ ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಹೋಲಿಕೆಗೆ ಅಸಾಧ್ಯವಾದದ್ದು. ಅವರ ತಂದೆ ಬಹಳ ಕೆಲಸ ಮಾಡಿದ್ದಾರೆಂದು ತೋರಿಸಲು ಹೋಲಿಕೆ ಮಾಡ್ತಿದ್ದಾರೆ. ಸೂರ್ಯನ ಜೊತೆಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಕೆ ಮಾಡಲು ಸಾಧ್ಯನಾ? ಸಾಧ್ಯನೇ ಇಲ್ಲ. ಸೂರ್ಯ ಸೂರ್ಯನೇ ಎಂದು ಹೇಳಿದರು.
ಮಹದಾಯಿ ವಿಚಾರವಾಗಿ ಮಾತನಾಡಿ, ಮಹದಾಯಿ ಏನಾದ್ರು ಪ್ರಗತಿಯಾಗಿದ್ರೆ ಅದಕ್ಕೆ ಕಾರಣ ಬಿಜೆಪಿ. ಮೋದಿ ಸರ್ಕಾರ ಬಂದ್ಮೇಲೆ ಮಹದಾಯಿ ಆದೇಶ ಹೊರಡಿಸಿದ್ದರು. ಮಾಡಿಸಿದ್ದ ಡಿಪಿಆರ್‌ನ್ನು ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಒಪ್ಪಿಗೆ ಪಡೆಯಿತು. ಕಾಂಗ್ರೆಸ್ ಏನು ಮಾಡಲಿಲ್ಲ. ಬರೀ ನಾವು ಮಾಡಿದ ಕೆಲಸಕ್ಕೆ ಅಡ್ಡಗೋಡೆ ಕಟ್ಟಿದ್ದಾರೆ. ಮಹದಾಯಿ ಮಲಪ್ರಭಾಗೆ ಹರಿಯಬಾರದು ಅಂತ ಗೋಡೆ ಕಟ್ಟಿದರು. ರಾಜ್ಯದ ವಿಷಯದಲ್ಲಿ ರಾಜಕಾರಣ ಬೇಡ. ನ್ಯಾಯ ಸಮ್ಮತವಾಗಿ ಕಾಂಗ್ರೆಸ್ ಸರ್ಕಾರ ನಡೆಯಲಿ. ಗೋವಾ ಸಿಎಂ ಹೇಳಿಕೆಯನ್ನು ನಾನು ಸಹ ಖಂಡಿಸುತ್ತೇನೆ. ಕಾಂಗ್ರೆಸ್‌ಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸೋನಿಯಾ ಗಾಂಧಿ ಗೋವಾ ಚುನಾವಣೆಯಲ್ಲಿ ಹನಿ ನೀರು ಮಹದಾಯಿಂದ ಮಲಪ್ರಭಾಗೆ ಕೊಡಲ್ಲ ಎಂದಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಯಾವ ನೈತಿಕ ಹಕ್ಕಿದೆ ಎಂದು ಕಿಡಿಕಾರಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜುಕುರುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್ – ಇಂಡಿಯಾ ಔಟ್ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?