ಉಡುಪಿ: ಕ್ರೈಸ್ತ ಧರ್ಮ ದಮನಿಸಲು ಮತಾಂತರ ನಿಷೇಧ ಕಾಯ್ದೆ ತರಲಾಗುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಎಚ್ಚರಿಕೆ ನೀಡಿದೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ರಾಜ್ಯದಲ್ಲಿ ಬಲವಂತದ ಮತಾಂತರ ಆಗಿದೆ ಎಂಬುದಕ್ಕೆ ರಾಜ್ಯದಲ್ಲಿ ಒಂದೇ ಒಂದು ಸಾಕ್ಷಿ ಪುರಾವೆಗಳು ಇಲ್ಲ. ತರಾತುರಿಯಲ್ಲಿ ಕಾಯ್ದೆಯನ್ನು ಜಾರಿಗೆ ತರುವ ಹಿಂದೆ ಷಡ್ಯಂತ್ರ ಇದೆ. ಕ್ರೈಸ್ತ ಸಮುದಾಯವನ್ನು ದಮನಿಸಲು ರಾಜಕೀಯ ಪ್ರೇರಿತವಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಈಗಾಗಿರುವ ಮತಾಂತರಗಳು ಸ್ವಇಚ್ಛೆಯಿಂದ ಹೊರತು ಬಲವಂತ ಮತಾಂತರ ಅಲ್ಲ. ಭಾರತೀಯ ಕ್ರೈಸ್ತ ಒಕ್ಕೂಟ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದು ದಿನ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ಪ್ರತಿ ಜಿಲ್ಲೆಯ ಸದಸ್ಯರು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್
ಚಿತ್ರದುರ್ಗದಲ್ಲಿ 30 ರಿಂದ 40 ಸಾವಿರ ಜನ ಮತಾಂತರವಾಗಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ಕೂಡ ನಡೆದಿದೆ. ಆದರೆ ಕೇವಲ 45 ಜನ ಮಾತ್ರ ಮತಾಂತರ ಆಗಿದ್ದಾರೆ ಎಂಬೂದು ತಿಳಿದುಬಂದಿದೆ. ನಿರಂತರವಾಗಿ ಕ್ರೈಸ್ತ ಧರ್ಮದ ಮೇಲೆ ಆರೋಪಗಳನ್ನು ಮಾಡುತ್ತಿದ್ದು ಯಾವುದಕ್ಕೂ ಸಾಕ್ಷಿಗಳಿಲ್ಲ ಎಂದು ಪ್ರಶಾಂತ್ ಜತ್ತನ್ನ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ
ವಕೀಲರಾದ ನೋಯೆಲ್ ಪ್ರಶಾಂತ ಕರ್ಕಡ ಮಾತನಾಡಿ, ರಾಜ್ಯದಲ್ಲಿ ಮತಾಂತರವಾಗಿರುವ ಪ್ರಕರಣದ ಬಗ್ಗೆ ಅನೇಕ ಗೊಂದಲಗಳು ಇವೆ. ಆರೋಪಗಳು ಸಾಬೀತಾಗಿಲ್ಲ. ಯಾವುದೇ ಸಾಕ್ಷ್ಯಗಳು ಇಲ್ಲ. ಭಾರತದ ಸಂವಿಧಾನದಲ್ಲಿ ಮತಾಂತರದ ವಿರುದ್ಧ ಈಗಾಗಲೇ ಕಾನೂನು ಇದೆ. ಪ್ರತ್ಯೇಕವಾಗಿ ಕಾನೂನಿನ ಅಗತ್ಯ ಇಲ್ಲ ಎಂಬುದು ನನ್ನ ಭಾವನೆ. ಆರ್ಟಿಕಲ್ 25 ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ಸಂವಿಧಾನದಲ್ಲೇ ಸಾಕಷ್ಟು ಅವಕಾಶಗಳು ಇರುವುದರಿಂದ ಅದನ್ನೇ ಸರ್ಕಾರ ಜಾರಿಗೆ ತರಬಹುದು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದರೆ ಕೆಲವೊಂದು ಮೂಲಭೂತವಾದಿ ಸಂಘಟನೆಗಳು ದುರ್ಬಳಕೆ ಮಾಡುವ ಸಾಧ್ಯತೆ ಇದೆ ಎಂಬ ಭಯವಿದೆ. ಭಾರತೀಯ ಕ್ರೈಸ್ತರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶ ಸೇವೆಯನ್ನು ಮಾಡುತ್ತಿದ್ದು ಇದನ್ನು ಸರ್ಕಾರ ಪರಿಗಣಿಸಬೇಕು ಎಂದರು.