ಬೆಂಗಳೂರು: ಉಪಚುನಾವಣೆಯ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಭೌತಿಕವಾಗಿಯೇನೋ ಸ್ಥಿರತೆ ಕಾಪಾಡಿಕೊಂಡಿದೆ. ಆದರೆ ಆಂತರಿಕವಾಗಿ ಒಂದು ಸುಭದ್ರ ಸರ್ಕಾರಕ್ಕಿರಬೇಕಾದ ಯಾವ ಲಕ್ಷಣಗಳೂ ಇಲ್ಲ. ಸರ್ಕಾರದಲ್ಲಿ ಸದ್ಯ ಗುಂಪುಗಾರಿಕೆಗೆ ತಾತ್ಕಾಲಿಕ ತಡೆ ಬಿದ್ದಿರಬಹುದು. ಆದರೆ ಸಂಪುಟ ವಿಸ್ತರಣೆ ಕುರಿತ ಜಟಾಪಟಿ, ಸವಾಲುಗಳು ಬಗೆಹರಿಯುವ ಲಕ್ಷಣಗಳು ಕಾಣ್ತಿಲ್ಲ.
ಸಂಪುಟ ಸರ್ಕಸ್ ಸುಸೂತ್ರವಾಗಿ ನಿಭಾಯಿಸುವ ದಾರಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಹುಡುಕುತ್ತಲೇ ಇದ್ದಾರೆ. ನಿತ್ಯ ಆಪ್ತರ ಜೊತೆ ಮಾತುಕತೆಗಳನ್ನು ನಡೆಸುತ್ತಿದ್ದರೂ ಸಮಸ್ಯೆಗಳನ್ನು ಬಗೆಹರಿಸುವ ದಾರಿ ಸಿಕ್ತಿಲ್ಲ. ಈ ನಡುವೆ ಮೈತ್ರಿ ಸರ್ಕಾರದಲ್ಲೂ ಆರಂಭದಲ್ಲಿ ಇಂಥದ್ದೇ ಸನ್ನಿವೇಶ ನಿರ್ಮಾಣವಾಗಿದ್ದಾಗ ಕಾಂಗ್ರೆಸ್-ಜೆಡಿಎಸ್ ನಾಯಕರು ಅನುಸರಿಸಿದ್ದ ಸ್ಟ್ರಾಟಜಿಯ ಜಾರಿ ಕುರಿತು ಸಿಎಂ ಯಡಿಯೂರಪ್ಪ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂತ್ರಿಗಿರಿ ಕೊಡದಿದ್ರೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಉಮೇಶ್ ಕತ್ತಿ ಹೊಸ ಬಾಂಬ್
Advertisement
Advertisement
ಮೈತ್ರಿ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಉದ್ದವೇ ಇತ್ತು. ಅಲ್ಲಿ ಎಲ್ಲರೂ ಸಚಿವ ಸ್ಥಾನ ಕೇಳೋರೆ ಅನ್ನುವಂತಾಗಿತ್ತು. ಆಗ ಕಾಂಗ್ರೆಸ್ ಹೈಕಮಾಂಡ್ ಒಂದು ಪರಿಹಾರಾತ್ಮಕ ಸೂತ್ರವನ್ನು ರಾಜ್ಯ ನಾಯಕರಿಗೆ ಕಳಿಸಿಕೊಟ್ಟಿತ್ತು. ಅದರ ಪ್ರಕಾರ ಆಗಿದ್ದ ಮೊದಲ ಹಂತದ ಸಂಪುಟ ಸಚಿವರ ಮೌಲ್ಯಮಾಪನ ಮಾಡುವುದು. ಒಂದು ವರ್ಷಕ್ಕೊಮ್ಮೆ ಮೌಲ್ಯಮಾಪನ ಮಾಡಿ ಆ ಪೈಕಿ ಯಾರು ಕೆಲಸ ಮಾಡದ ಸಚಿವರು ಇರುತ್ತಾರೋ ಅವರನ್ನು ಬದಲಾಯಿಸುವ ನಿರ್ಧಾರ ಆಗಿತ್ತು. ಹಾಗೆ ಬದಲಾದ ಸಚಿವರ ಸ್ಥಾನಕ್ಕೆ ಉಳಿದ ಆಕಾಂಕ್ಷಿಗಳ ಪೈಕಿ ಕೆಲವರನ್ನು ತುಂಬುವುದು ಆ ಸ್ಟ್ರಾಟಜಿಯ ಮುಖ್ಯ ಉದ್ದೇಶ. ಇದರಿಂದ ಅಸಮಧಾನವೂ ತಣಿಯುತ್ತೆ, ಆಕಾಂಕ್ಷಿಗಳ ಬೇಗುದಿಯನ್ನೂ ನಿಯಂತ್ರಿಸಬಹುದು ಎಂಬ ಲೆಕ್ಕಾಚಾರ ಹಾಕಿತ್ತು ಕಾಂಗ್ರೆಸ್. ಆದರೆ ನಂತರದ ರಾಜಕೀಯ ಸನ್ನಿವೇಶಗಳು ಕಾಂಗ್ರೆಸ್‍ಗೆ ತನ್ನ ಆ ಸ್ಟ್ರಾಟಜಿ ಜಾರಿಗೆ ಅವಕಾಶ ಮಾಡಿಕೊಡಲಿಲ್ಲ.
Advertisement
Advertisement
ಅದೇ ಸ್ಟ್ರಾಟಜಿಯನ್ನು ಬಿಜೆಪಿ ಸರ್ಕಾರದಲ್ಲೂ ಅಳವಡಿಸಲು ಯಡಿಯೂರಪ್ಪನವರು ಒಲವು ತೋರಿದ್ದಾರೆ ಎನ್ನಲಾಗಿದೆ. ಹೇಳಿಕೇಳಿ ಸರ್ಕಾರ ಸ್ಥಿರವಾಗಿದೆ. ವರ್ಷಕ್ಕೊಮ್ಮೆ ಸಚಿವರ ಬದಲಾವಣೆ ಪ್ರಸ್ತಾಪಕ್ಕೆ ಸ್ವಲ್ಪ ಕಷ್ಟವಿದ್ದರೂ ಎಲ್ಲರನ್ನೂ ಒಪ್ಪಿಸಬಹುದು. ಒಂದೊಮ್ಮೆ ಯಾರಾದರೂ ಅಸಮಧಾನಗೊಂಡರೂ ಅವರಿಗೆ ಪಕ್ಷದ ಶಿಸ್ತು ದಾಟಲು ಅವಕಾಶ ಮತ್ತು ಧೈರ್ಯ ಎರಡೂ ಇರೋದಿಲ್ಲ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಪಕ್ಷ ಬಿಟ್ಟು ಬಂದಿರೋ ಅಪೇಕ್ಷಿತ ಶಾಸಕರೇ ಇರಲಿ ಪಕ್ಷದ ಅಸಮಧಾನಗೊಂಡವರೇ ಇರಲಿ ಬಿಜೆಪಿ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಅವರ ಸಿಟ್ಟು ಏನೇ ಇದ್ರೂ ಪಕ್ಷದ ಚೌಕಟ್ಟು ದಾಟಿ ಹೋಗಲ್ಲ. ಒಂದೊಮ್ಮೆ ಅಂಥ ಸ್ಥಿತಿ ಬಂದರೂ ಅಂತಹವರ ಸಂಖ್ಯೆ ಒಂದೆರಡಷ್ಟೇ.
ಈ ಎಲ್ಲ ಲೆಕ್ಕಾಚಾರಗಳನ್ನೂ, ಸಂಭಾವ್ಯ ಅಪಾಯಗಳನ್ನೂ ಯಡಿಯೂರಪ್ಪ ಆಲೋಚನೆ ಮಾಡುತ್ತಿದ್ದಾರೆ. ಒಂದೊಮ್ಮೆ ಹೈಕಮಾಂಡ್ ಸಹ ಕೊನೆಯಲ್ಲಿ ಕೈ ಹಿಡಿಯದಿದ್ರೆ ಇದೇ ದಾರಿಯಲ್ಲಿ ಸಾಗುವುದು ಯಡಿಯೂರಪ್ಪ ಅವರಿಗೆ ಅನಿವಾರ್ಯ ಆಗಲೂಬಹುದು.