ಸಾಲಮನ್ನಾ ಇನ್ನೂ ಒಂದು ತಿಂಗಳು ಅನುಮಾನ!

Public TV
2 Min Read
Loan HDK

ಬೆಂಗಳೂರು: ನಾನು ಸಾಂದರ್ಭಿಕ ಶಿಶು. ಕಾಂಗ್ರೆಸ್‍ನ ಹಂಗಿನಲ್ಲಿ ಸಿಎಂ ಆಗಿದ್ದೇನೆ ಅಂತ ಸಿಎಂ ಕುಮಾರಸ್ವಾಮಿ ಹೇಳಿಕೊಂಡು ಬರ್ತಿದ್ದಾರೆ. ಜೊತೆಗೆ, ಸಮ್ಮಿಶ್ರ ಸರ್ಕಾರದ ಆಯಸ್ಸಿನ ಬಗ್ಗೆ ರಾಜ್ಯವ್ಯಾಪಿ ಚರ್ಚೆ ಇದೆ. ಜೊತೆಗೆ, ರೈತರ ಸಂಪೂರ್ಣ ಸಾಲಮನ್ನಾಕ್ಕೆ ಸರ್ಕಾರ ಕೇಳಿದ್ದ 15 ದಿನಗಳ ಗಡುವು ಅಂತ್ಯಗೊಂಡಿದೆ. ಸಾಲಮನ್ನಾ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ನಿರಾಸೆಯೂ ಆಗಿದೆ.

ವಾಸ್ತವವಾಗಿ ಸಂಪೂರ್ಣ ಸಾಲಮನ್ನಾವಿರಲಿ, ಕಳೆದ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಸಾಲವೇ ಇನ್ನೂ ಮನ್ನಾ ಆಗಿಲ್ಲ. ಈಗಿನ ಸ್ಥಿತಿಯಲ್ಲಿ ಸದ್ಯಕ್ಕೆ ಸಾಲಮನ್ನಾ ಘೋಷಣೆ ಅನುಮಾನವಾಗಿದ್ದು, ಮುಂದಿನ ತಿಂಗಳು ಮಂಡನೆಯಾಗಲಿರೋ ಬಜೆಟ್‍ವರೆಗೂ ರೈತರು ಕಾಯಲೇಬೇಕಿದೆ.

ಸಾಲಮನ್ನಾಕ್ಕೆ ಸರ್ಕಾರ ಬದ್ಧ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಪುನರುಚ್ಚರಿಸಿದ್ದರೂ, ಯಾವಾಗ ಅಂತ ಎಲ್ಲಿಯೂ ಹೇಳಿಲ್ಲ. ಸಾಲಮನ್ನಾಕ್ಕೆ ಯಾವುದೇ ಗಡುವಿಲ್ಲ ಅಂತ ಉಪ ಮುಖ್ಯಮಂತ್ರಿ ಪರಮೇಶ್ವರ್ ನೀಡಿರೋ ಹೇಳಿಕೆಯನ್ನು ಸಮರ್ಥಿಸಿಕೊಂಡಿರೋ ಎಚ್ಡಿಕೆ, ಸಾಮಾನ್ಯ ಕನಿಷ್ಟ ಕಾರ್ಯಕ್ರಮದಡಿ ಆರ್ಥಿಕ ಶಿಸ್ತಿನಡಿ ಸಾಲಮನ್ನಾ ಮಾಡೋದಾಗಿ ಸ್ಪಷ್ಟಪಡಿಸಿದ್ದಾರೆ.

ಸಾಲಮನ್ನಾ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದ ಎಚ್ಡಿಕೆ, ಇನ್ನೆಷ್ಟು ದಿನ ರಾಜಕೀಯ ಸುದ್ದಿ ಪ್ರಸಾರ ಮಾಡ್ತೀರಾ ಅಂತ ಸವಾಲೆಸೆದಿದ್ದಾರೆ. ನಮ್ನ ಸರ್ಕಾರ ಐದು ವರ್ಷ ಪೂರೈಸುತ್ತೆ. ಕೊನೆ ಪಕ್ಷ ಒಂದು ವರ್ಷವಾದ್ರು ನಮ್ಮನ್ನು ಯಾರು ಮುಟ್ಟೋಕೆ ಆಗೋಲ್ಲ. ಲೋಕಸಭೆ ಚುನಾವಣೆಯವರೆಗೂ ಯಾರು ಏನು ಮಾಡೋಕೂ ಆಗಲ್ಲ ಅಂದಿದ್ದಾರೆ.

siddu hdk

ವಿಳಂಬ ಏಕೆ?
ಸಾಲಮನ್ನಾ ವಿಚಾರದಲ್ಲಿ ಮೈತ್ರಿಕೂಟ ಸರ್ಕಾರದಲ್ಲೇ ಅಪಸ್ವರ ಕೇಳಿಬಂದಿದೆ. ಗುರುವಾರ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಸಭೆಯಲ್ಲೂ ಈ ಕುರಿತು ಪ್ರಸ್ತಾಪ ನಡೆದಿದೆ. ಸಂಪೂರ್ಣ ಸಾಲಮನ್ನಾಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಸಾಲಮನ್ನಾ ಕ್ರೆಡಿಟ್ ಜೆಡಿಎಸ್‍ಗೆ ಸಿಗಬಾರದು ಅಂತಾ ಕಾಂಗ್ರೆಸ್ ನಿಗಾವಹಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸಾಮಾನ್ಯ ಕನಿಷ್ಟ ಯೋಜನೆ ಅಡಿ ರೈತರ ಸಾಲ ಮನ್ನಾ ಮಾಡುವ ಕುರಿತು ಸರಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಸಿದ್ದು ಸರಕಾರದ ಸಾಲ ಮನ್ನಾ ಕಥೆ ಏನು?
2017ರ ಜೂನ್ 21ರಿಂದ 2018ರ ಜೂ.ನ್ 20ರೊಳಗಿನ ಸಾಲಮನ್ನಾ ಮಾಡುವುದಾಗಿ ಸಿದ್ಧರಾಮಯ್ಯ ಸರಕಾರ ಘೋಷಿಸಿತ್ತು. ಆದ್ರೆ ಸಹಕಾರ ಸಂಘಗಳಲ್ಲಿನ 50 ಸಾವಿರವರೆಗೆ ಸಾಲ ಮನ್ನಾ ಅಂತ ಮಾತ್ರ ಸರಕಾರ ಘೋಷಿಸಿತ್ತು. ಸಿದ್ಧರಾಮಯ್ಯ ಸರ್ಕಾರ ಒಟ್ಟು 22 ಲಕ್ಷ ರೈತರ 8,165 ಕೋಟಿ ಸಾಲಮನ್ನಾ ಮಾಡಿದ್ದೇವೆ ಅಂತಾ ಹೇಳಿದ್ದರು. ಆದ್ರೆ ಮನ್ನಾ ಆಗಿರೋದು 14 ಲಕ್ಷ ರೈತರ 4,967 ಕೋಟಿ ಮಾತ್ರ. ಸಾಲಮನ್ನಾಕ್ಕೆ ಜೂನ್ 20 ಕೊನೆಯ ದಿನವಾಗಿದೆ. 50 ಸಾವಿರಕ್ಕಿಂತ ಮೇಲ್ಪಟ್ಟ ಹಣವನ್ನು ಲಕ್ಷಾಂತರ ರೈತರು ಸಾಲಮನ್ನಾ ನಿರೀಕ್ಷೆಯಲ್ಲಿ ಇನ್ನೂ ಪಾವತಿಸಿಲ್ಲ.

 

Share This Article
Leave a Comment

Leave a Reply

Your email address will not be published. Required fields are marked *