– ಕೆ.ಪಿ. ನಾಗರಾಜ್
ಮೈಸೂರು: ರಾಜ್ಯ ರಾಜಕೀಯದ ಹೈವೋಲ್ಟೇಜ್ ಚುನಾವಣಾ ಕ್ಷೇತ್ರ ಅಂತಾ ಅನ್ನಿಸಿಕೊಂಡಿದ್ದ ವರುಣಾ ಕ್ಷೇತ್ರ ಈಗ ಹೈವೋಲ್ಟೇಜ್ ಇರಲಿ, ವೋಲ್ಟೇಜ್ ಕೂಡ ಇಲ್ಲದಂತಾಗಿ ಮಂಕಾಗಿದೆ. ಬಿಜೆಪಿಗೆ ಬಿಜೆಪಿಯೆ ಕೊಟ್ಟು ಕೊಂಡ ಸ್ಟ್ರೋಕ್ ಗೆ ವರುಣಾ ಚುನಾವಣಾ ಕದನ ಈಗ ಅಕ್ಷರಶಃ ಒನ್ ಸೈಡ್ ಮ್ಯಾಚ್. ಕಾಂಗ್ರೆಸ್ ಅಭ್ಯರ್ಥಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅತ್ಯಂತ ಸೇಫ್ ಆಗಿ ವಿಧಾನಸೌಧ ಪ್ರವೇಶಿಸುವುದು ಬಹುತೇಕ ನಿಶ್ಚಿತ. ಅಷ್ಟರಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಈ ರಾಜ್ಯದ ಅತ್ಯಂತ ಸೇಫ್ ಕ್ಷೇತ್ರವಾಗಿ ವರುಣಾ ಮಾರ್ಪಟ್ಟಿದೆ.
Advertisement
ವಿಜಯೇಂದ್ರ ಯಾವಾಗ ಕ್ಷೇತ್ರಕ್ಕೆ ಎಂಟ್ರಿಕೊಟ್ಟರೋ ಅವತ್ತಿನಿಂದಲೇ ವರುಣಾ ಕದನಕ್ಕೆ ಹೈವೋಲ್ಟೇಜ್ ಪಾಸ್ ಆಗಿದ್ದು ಸತ್ಯ. ವಿಜಯೇಂದ್ರ ಎಂಟ್ರಿ ಮೈಸೂರು ಭಾಗದ ಕೆಲವು ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿಯಲ್ಲಿದ್ದು ಮೈಸೂರಿನ ಮೇಲೆ ಸದಾ ಒಂದು ಕಣ್ಣು ಇಟ್ಟಿರುವ ನಾಯಕರ ಕಣ್ಣು ಕೆಂಪು ಮಾಡಿತ್ತು. ಆದರೆ, ಮೈಸೂರು ಭಾಗದ ವೀರಶೈವ – ಲಿಂಗಾಯತ ಸಮುದಾಯದ ಜನ ವಿಜಯೇಂದ್ರರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿಬಿಟ್ಟರು. ವಿಜಯೇಂದ್ರ ತಮ್ಮ ಮುಂದಿನ ನಾಯಕ ಅನ್ನೋ ರೀತಿಯಲ್ಲಿ ಮಾತಾಡೋಕೆ ಶುರು ಮಾಡಿದರು.
Advertisement
ಹೇಳಿ ಕೇಳಿ ಈಗ ಮೈಸೂರು ಭಾಗದಲ್ಲಿ ವೀರಶೈವ – ಲಿಂಗಾಯತ ಸಮುದಾಯಕ್ಕೆ ಒಬ್ಬ ದೃಢ ನಾಯಕನ ಕೊರತೆ ಇದೆ. ರಾಜಶೇಖರಮೂರ್ತಿ, ಗುರುಪಾದಸ್ವಾಮಿ, ಕೆ. ಮಹದೇವ್, ಮಹದೇವಪ್ರಸಾದ್ ಅವರ ನಂತರ ಒಬ್ಬ ಸಮರ್ಥ ನಾಯಕನ ಕೊರತೆ ಈ ಸಮುದಾಯಕ್ಕೆ ಇದೆ. ವಿಜಯೇಂದ್ರ ಮೂಲಕ ಈ ಕೊರತೆ ನೀಗುತ್ತೆ ಅನ್ನೋ ಲೆಕ್ಕಚಾರದಲ್ಲಿ ಸಮುದಾಯದ ಇದ್ದದ್ದು ಸ್ಪಷ್ಟ. ಹೀಗಾಗಿಯೆ ವಿಜಯೇಂದ್ರ ಹೋದ ಕಡೆಯಲೆಲ್ಲಾ ಅದರಲ್ಲೂ ವೀರಶೈವ – ಲಿಂಗಾಯತರ ಪ್ರಾಬಲ್ಯ ಇರೋ ಹಳ್ಳಿಗಳಲ್ಲಿ ಅದ್ಧೂರಿ ಸ್ವಾಗತವೇ ದೊರೆತಿತ್ತು.
Advertisement
Advertisement
ಆದರೆ, ಸಿನಿಮಾಕ್ಕಿಂತಲೂ ರೋಚಕವಾದ ತಿರುವು ನೀಡಿದ ಬಿಜೆಪಿ ವಿಜಯೇಂದ್ರ ಅವರ ತಂದೆಯ ಬಾಯಲ್ಲೇ ಮಗನಿಗೆ ಟಿಕೆಟ್ ಇಲ್ಲ ಅಂತಾ ಹೇಳಿಸಿ ದೊಡ್ಡ ಸಿಡಿಲನ್ನೇ ಬಡಿಸಿತ್ತು. ಇದು ಈಗ ಮುಗಿದ ಅಧ್ಯಾಯ. ಆದರೆ, ಈ ಅಧ್ಯಾಯದಿಂದ ಉಂಟಾಗಿರುವ ಅಲೆಗಳು ಸುಳಿಗಳಾಗಿ ಮಾರ್ಪಡುತ್ತಿವೆ. ಈ ಸುಳಿಯಲ್ಲಿ ಸಿಲುಕುತ್ತಿರುವುದು ಬಿಜೆಪಿ ಅಭ್ಯರ್ಥಿಗಳು. ಈ ಸುಳಿಯ ಸೆಳೆತ ಕಡಮೆ ಆಗದೆ ಇದ್ದರೆ ಮೈಸೂರು – ಚಾಮರಾಜ ನಗರ ಭಾಗದಲ್ಲಿ ಮೂರ್ನಾಲ್ಕು ಸ್ಥಾನ ಗೆಲ್ಲುವ ಲೆಕ್ಕ ಹಾಕಿರೋ ಬಿಜೆಪಿಗೆ ಮರ್ಮಾಘಾತವಾಗುವುದು ನಿಶ್ಚಿತ. ಈ ಸುಳಿಯ ಸೆಳೆತ ಕಡಮೆ ಮಾಡೋ ಶಕ್ತಿ ಸ್ವತಃ ವಿಜಯೇಂದ್ರಗೂ ಇಲ್ಲ ಎಂಬುದು ವಾಸ್ತವ ಸತ್ಯ
`ನೋಟಾ ಕಡೆಗೆ ನೋಟ…!’
ವಿಜಯೇಂದ್ರಗೆ ಟಿಕೆಟ್ ತಪ್ಪಿ ಟಿ. ಬಸವರಾಜಪ್ಪ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರೋ ಆ ಕ್ಷಣವೇ ವರುಣಾ ಬಿಜೆಪಿ ಕಾರ್ಯಕರ್ತರ ತಂತ್ರಗಳು ಬದಲಾದವು. ಇಷ್ಟು ದಿನ ಬಿಜೆಪಿಗೆ ಮತ ಹಾಕಿ ಅಂತಾ ಕೇಳುತ್ತಿದ್ದವರು ಈಗ ನೋಟಾ ಒತ್ತಿ ಅಂತಾ ಅಭಿಯಾನ ಆರಂಭಿಸಿದ್ದಾರೆ. ನೋಟಾ ಮತ ಹೆಚ್ಚಾದರೆ ಮರು ಚುನಾವಣೆ ನಡೆಯುತ್ತೆ ಅನ್ನೋದು ಈ ಕಾರ್ಯಕರ್ತರ ಕಲ್ಪನೆ. ಆದರೆ, ಕಾನೂನಾತ್ಮಕವಾಗಿ ಇದು ಸಾಧ್ಯವಿಲ್ಲ. ಆದರೂ, ತಮ್ಮ ಆಕ್ರೋಶವನ್ನು ಕಾರ್ಯಕರ್ತರು ಹೀಗೆ ವ್ಯಕ್ತಪಡಿಸುತ್ತಿರುವ ಕಾರಣ ಒನ್ಸ್ ಅಗೈನ್ ಇದು ಬಿಜೆಪಿ ಅಭ್ಯರ್ಥಿಗೆ ನಷ್ಟ ಉಂಟಾಗುತ್ತೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡಿಯೂ ಬಿಜೆಪಿ ಠೇವಣಿ ಕಳೆದುಕೊಂಡಿತ್ತು. ಅಂತಹದರಲ್ಲಿ ಈಗ ಬಿಜೆಪಿ ಕಾರ್ಯಕರ್ತರೇ ನೋಟಾ ಅಭಿಯಾನ ನಡೆಸುತ್ತಿರುವುದು ನೋಡಿದರೆ ವರುಣಾದಲ್ಲಿ ಬಿಜೆಪಿ ಸ್ಥಿತಿ ಏನಾಗಬಹುದು ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ. ಇದನ್ನು ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್
`ಲಡ್ಡು ಬಂದು ಬಾಯಿಗೆ ಬಿತ್ತು..!’
ಈ ಬಾರಿ ವರುಣಾ ಕ್ಷೇತ್ರ ಕಾಂಗ್ರೆಸ್ ಗೆ ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋ ರೀತಿ ಆಗಿದೆ. ವಿಜಯೇಂದ್ರ ಸ್ಪರ್ಧೆ ಹಿನ್ನೆಲೆಯಲ್ಲಿ ಎದುರಾಗಿದ್ದ ಫೈಟ್ ಈಗ ಠುಸ್ ಪಟಾಕಿ ಅಂತಾಗಿದ್ದು ಸಿಎಂ ಪುತ್ರ ಡಾ. ಯತೀಂದ್ರ ಬಾಯಿಗೆ ಲಡ್ಡು ಬಿದ್ದಂತಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಈಗ ತಾವು ಎಷ್ಟು ಮತಗಳ ಅಂತರದಿಂದ ಗೆಲುತ್ತೇವೆ ಎಂಬ ಲೆಕ್ಕ ಹಾಕುತ್ತಿದೆ. ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಕಳೆದ ಬಾರಿ 20 ಸಾವಿರ ಅಂತರದಿಂದ ಗೆದ್ದಿದ್ದರು. ಈ ಬಾರಿ ಅದರ ಎರಡು ಪಟ್ಟು ಅಂತರದಿಂದ ಗೆಲ್ತೀವಿ ಅನ್ನೋ ಮನ:ಸ್ಥಿತಿಯಲ್ಲಿ ಕಾಂಗ್ರೆಸ್ ಪಾಳಯವಿದೆ. ಇದನ್ನು ಓದಿ: ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ
ಅತಂತ್ರರಾದ ರೇವಣ್ಣ ಸಿದ್ದಯ್ಯ…!
ಸಿದ್ದರಾಮಯ್ಯ ವಿರುದ್ಧ ರಣತಂತ್ರ ರೂಪಿಸಲು ಕಾಂಗ್ರೆಸ್ ಬಿಟ್ಟು ಬಂದ ನಿವೃತ್ತ ಐಪಿಎಸ್ ಅಧಿಕಾರಿ ರೇವಣ್ಣಸಿದ್ದಯ್ಯ ಈಗ ಅತಂತ್ರರಾದಂತೆ ಕಾಣುತ್ತಿದ್ದಾರೆ. ವಿಜಯೇಂದ್ರ ಟಿಕೆಟ್ ತಪ್ಪುವ ಒಂದು ದಿನ ಮುಂಚೆ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ರೇವಣ್ಣಸಿದ್ದಯ್ಯ, ವರುಣಾದಲ್ಲಿ ಸಿಎಂ ಮಗನನ್ನು ಸೋಲಿಸೋಕೆ ವಿಜಯೇಂದ್ರ ಬೆಂಬಲಿಸುತ್ತೇನೆ. ಚಾಮುಂಡೇಶ್ವರಿಯಲ್ಲಿ ಸಿಎಂ ಸೋಲಿಸೋಕೆ ಜೆಡಿಎಸ್‍ನ ಜಿ.ಟಿ. ದೇವೇಗೌಡರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಆದರೆ, ರೇವಣ್ಣಸಿದ್ದಯ್ಯ ಮಾಡಿದ್ದ ಪ್ಲಾನ್ ಅನ್ನು ಬಿಜೆಪಿಯೇ ಉಲ್ಟಾ ಮಾಡಿದೆ. ಹೀಗಾಗಿ, ರೇವಣ್ಣಸಿದ್ದಯ್ಯ ಅತ್ತ, ಇತ್ತ, ಎತ್ತವೂ ಇಲ್ಲದಂತೆ ಅತಂತ್ರರಾಗಿಬಿಟ್ಟಿದ್ದಾರೆ. ಇದನ್ನು ಓದಿ: ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ
https://www.facebook.com/publictv/videos/2208282452522828/?q=Public%20TV%20varuna%20