ಮೈಸೂರು: ಒಂದು ಕಾಲಕ್ಕೆ ಚುನಾವಣೆ ಬಂತೆಂದರೆ ಚಾಮರಾಜನಗರ (Chamarajanagar) ಜಿಲ್ಲೆಯ ಗಡಿ ಭಾಗದಲ್ಲಿ ಕಾಡುಗಳ್ಳ, ನರಹಂತಕ ವೀರಪ್ಪನ್ (Veerappan) ಆತಂಕ ತಂದೊಡ್ಡುತ್ತಿದ್ದ. ಇದರಿಂದ ಆತನ ಕಾರ್ಯಕ್ಷೇತ್ರದಲ್ಲಿ ಮತಗಟ್ಟೆಗಳಿಗೆ, ರಾಜಕೀಯ ಪಕ್ಷಗಳ ಮುಖಂಡರಿಗೆ ಭದ್ರತೆ ಒದಗಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗುತ್ತಿತ್ತು.
ರಾಜಕಾರಣಿಗಳು ಅಪಹರಣ ಭಯದಿಂದ ಪ್ರಚಾರಕ್ಕೆ ಹೋಗಲು, ನೌಕರರು ಚುನಾವಣಾ ಕರ್ತವ್ಯಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಆದರೆ 2008 ವಿಧಾನಸಭಾ ಚುನಾವಣೆಯಿಂದ (Assembly Election) ಇದು ತಪ್ಪಿದೆ. ಲೋಕಸಭೆ ಚುನಾವಣೆಗೂ ಈತನ ಭಯವಿಲ್ಲ.
Advertisement
Advertisement
ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿ ಭಾಗದಲ್ಲಿ ವ್ಯಾಪಿಸಿಕೊಂಡಿರುವ ದಟ್ಟಡವಿಯನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ವೀರಪ್ಪನ್ ಮೊದಲು ಶ್ರೀಗಂಧ ಕಳ್ಳ ಸಾಗಾಣಿಕೆ ಮಾಡುತ್ತಿದ್ದ. ಶ್ರೀಗಂಧ ಮುಗಿದ ನಂತರ ದಂತಕ್ಕಾಗಿ ಆನೆಗಳನ್ನು ಹತ್ಯೆ ಮಾಡತೊಡಗಿದ. ಆನೆಗಳು ಕಡಿಮೆಯಾದ ನಂತರ ಕರಿಕಲ್ಲು ಮಾಲೀಕರಿಂದ ಸುಲಿಗೆ ಮಾಡುತ್ತಿದ್ದ. ವಿಶೇಷ ಪಡೆಯ ಕಾರ್ಯಾಚರಣೆಯಿಂದ ತನ್ನೆಲ್ಲಾ ಕುಕೃತ್ಯಗಳಿಗೂ ತಡೆಯುಂಟಾದಾಗ ಅಧಿಕಾರಿಗಳು, ಗಣ್ಯ ನಾಗರಿಕರನ್ನು ಅಪಹರಿಸಿ, ಹಣ ವಸೂಲಿ ಮಾಡತೊಡಗಿದ.
Advertisement
ಮೊದಮೊದಲು ಗಣಿ ಮಾಲೀಕರ ಕಡೆಯವರನ್ನು ಅಪಹರಿಸಿ ಹಣ ವಸೂಲಿ ಮಾಡಿದ್ದ ವೀರಪ್ಪನ್ ಕೊನೆಗೆ ಡಾ. ರಾಜ್‌ಕುಮಾರ್ ಮತ್ತು ಮಾಜಿ ಸಚಿವ ಹೆಚ್. ನಾಗಪ್ಪ ಅವರನ್ನೇ ಅಪಹರಿಸಿದ್ದ. ಇಂತಹ ವೀರಪ್ಪನ್ 2004ರ ಅಕ್ಟೋಬರ್ 18 ರಂದು ತಮಿಳುನಾಡು ವಿಶೇಷ ಪಡೆಯ ಪೊಲೀಸರಿಗೆ ಬಲಿಯಾದ.
Advertisement
ಬಲಿಯಾದ ವೀರಪ್ಪನ್‌ಗೆ ಬಹಳ ವರ್ಷಗಳಿಂದ ರಾಜಕೀಯ ಪಕ್ಷದ ನಂಟಿತ್ತು. ಆದರೆ ಅದು ಬಹಿರಂಗವಾಗಿದ್ದು 1989ರ ಚುನಾವಣೆಯಲ್ಲಿ. ಆ ಚುನಾವಣೆಯಲ್ಲಿ ಆತ ಕಾಂಗ್ರೆಸ್ ಅಭ್ಯರ್ಥಿ ಜಿ. ರಾಜೂಗೌಡರಿಗೆ ಮತ ಹಾಕುವಂತೆ ಬಂದೂಕು ಹಿಡಿದು ಮತದಾರರಿಗೆ ಬೆದರಿಕೆ ಹಾಕಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ವಿಷಯ ರಾಜ್ಯ ವಿಧಾನಮಂಡಲದಲ್ಲೂ ಪ್ರಸ್ತಾಪವಾಗಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ರಾಜಕೀಯ ಅನುಭವವಿಲ್ಲದೆ ಸತತ ಎರಡು ಬಾರಿ MLA- ಪಕ್ಷ ಬದಲಿಸಿಯೂ ಗೆದ್ದಿದ್ದ ಡಾ.ಶಿವರಾಜ್ ಪಾಟೀಲ್‍ಗೆ ಈ ಬಾರಿ ಟಫ್
ಇದೇ ವೀರಪ್ಪನ್ ರಾಜೂಗೌಡರ ಬದ್ಧವೈರಿ ಮಾಜಿ ಸಚಿವ ಹೆಚ್. ನಾಗಪ್ಪ ಅವರನ್ನು ಅಪಹರಿಸಿದ್ದ. ನಾಗಪ್ಪ ಅವರು ವೀರಪ್ಪನ್ ವಶದಲ್ಲಿದ್ದಾಗಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆದರೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರು 108 ದಿನಗಳ ವನವಾಸದ ನಂತರ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದಿದ್ದರು.
ಸರಿಸುಮಾರು ಎರಡೂವರೆ ದಶಕಗಳ ಕಾಲ ಪೊಲೀಸರು ಮತ್ತು ಅರಣ್ಯ ಇಲಾಖೆಯವರನ್ನು ಕಾಡಿದ ವೀರಪ್ಪನ್ 111 ನಾಗರಿಕರು, 33 ಪೊಲೀಸರು, 5 ಅರಣ್ಯ ಸಿಬ್ಬಂದಿ ಮತ್ತು ಒಬ್ಬ ಬಿಎಸ್‌ಎಫ್ ಯೋಧನನ್ನು ಹತ್ಯೆ ಮಾಡಿದ್ದ. ಆತನ ವಿರುದ್ಧ 182 ಪ್ರಕರಣಗಳು ದಾಖಲಾಗಿದ್ದು, 135 ಮಂದಿ ಸಹಚರರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್‍ನ ಹೊಸ ಮುಖಗಳ ಪ್ರಯೋಗ ಶಾಲೆಯಾಗುತ್ತಾ ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯ?
ವೀರಪ್ಪನ್ ಹಾವಳಿಯಿಂದ ಮುಕ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈಗ ಅರಣ್ಯ ಇಲಾಖೆ ಪ್ರವಾಸೋದ್ಯಮಕ್ಕೆ ಅದ್ಯತೆ ನೀಡಿದೆ. ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ. ಗುಡಿ, ಭರಚುಕ್ಕಿ ಜಲಪಾತ, ಬಂಡೀಪುರಗಳಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.