ಬೆಂಗಳೂರು: ಎಲೆಕ್ಷನ್ ಕಲೆಕ್ಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕೆ. ಸಿ ವೇಣುಗೋಪಾಲ್ ಅವರಿಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ದೂರಿನಲ್ಲಿ ಏನ್ ಹೇಳಿದ್ದಾರೆ..?
ಏನ್ ಬ್ರದರ್.. ನಿಮ್ಮ ಸಚಿವರು.. ಹೀಗಂತೆ.. ಈ ಸಂದರ್ಭದಲ್ಲಿ ಇದು ಬೇಕಿತ್ತಾ..? ಚುನಾವಣೆಯ ಹೊತ್ತಲ್ಲಿ ಎರಡು ಪಕ್ಷಗಳಿಗೂ ಹೊಡೆತ ಅಲ್ವೇನ್ರೀ.. ಏನಾದ್ರೂ ಮಾಡಿ..! ಎರಡು ಬಾರಿ ಸಚಿವರಾಗವ್ರೇ.. ಮನಿ ಮ್ಯಾಟರ್ ಡೀಲ್ ಮಾಡೋದು ಗೊತ್ತಿಲ್ವ..? ನೋಡಿ ನಾವೇ ಬಿಜೆಪಿಗೆ ಅಸ್ತ್ರ ಕೊಟ್ಟಂಗೆ ಆಯ್ತು.. ಸ್ವಲ್ಪ ನಿಮ್ಮವರಿಗೆ ಹೇಳಿ ಎಂದು `ಕೈ’ ಉಸ್ತುವಾರಿ ವೇಣುಗೋಪಾಲ್‍ಗೆ ಕರೆ ಮಾಡಿ ಎಚ್‍ಡಿಕೆ ದೂರು ನೀಡಿದ್ದಾರೆ ಎನ್ನಲಾಗಿದೆ.
Advertisement
Advertisement
ಸೇಡು ತೀರಿಸಿಕೊಂಡ ಸಿಎಂ:
ಸರ್ಕಾರ ರಚನೆ ಮಾಡುವ ಆರಂಭದಲ್ಲೇ ಕೃಷ್ಣ ಬೈರೇಗೌಡರು, ಸಚಿವ ಎಚ್ ಡಿ ರೇವಣ್ಣ ಅವರು ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಆ ಸೇಡನ್ನು ಕುಮಾರಸ್ವಾಮಿ ಅವರು ಇಂದು ತೀರಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಸಚಿವರು ಸ್ಪಷ್ಟನೆ:
ಹಣ ಸೀಜ್ ಮಾಡಿರುವ ಕುರಿತು ನಿನ್ನೆಯೇ ಪ್ರತಿಕ್ರಿಯೆ ನೀಡಿರುವ ಕೃಷ್ಣ ಬೈರೇಗೌಡ, ಈ ಬಗ್ಗೆ ನಮಗೆ ಗೊತ್ತಿಲ್ಲ. ಅಲ್ಲದೇ ನಮ್ಮ ಇಲಾಖೆಯ ಯಾವ ಅಧಿಕಾರಿಯೂ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ಆಗಲಿ ಅಥವಾ ನನಗಾಗಲಿ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
Advertisement
2 ಕೋಟಿ ರೂ. ಸೀಜ್:
ಶುಕ್ರವಾರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್‍ಗೆ ಆದಾಯ ತೆರಿಗೆ ಇಲಾಖೆಯವರು ಶಾಕ್ ಕೊಟ್ಟಿದ್ದರು. ಆರ್‍ಡಿಪಿಆರ್ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ ಪಾಟೀಲ್, ಬೆಂಗಳೂರಿನ ಗಾಂಧಿನಗರದ ಹೋಟೆಲ್ ನಲ್ಲಿ ಮೂರು ರೂಮ್ ಬುಕ್ ಮಾಡಿದ್ದರು. ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಆಗ ಕೊಠಡಿ ಸಂಖ್ಯೆ 104, 105, 115ರಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಐಟಿ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ ಪಾಟೀಲ್ ಪರಾರಿಯಾಗಿದ್ದಾರೆ. 500 ಮತ್ತು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು.
ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆಲಸ ಮಾಡುತ್ತಿದ್ದರು. ಹಾವೇರಿಯಲ್ಲೂ ಮೂರು ಮನೆಯನ್ನು ಕಟ್ಟಿಸಿದ್ದಾರೆ. ಇವರು ಬೆಂಗಳೂರಿಗೆ ಹಣ ಸಾಗಾಟ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನ ಜಾವ 3.30ಕ್ಕೆ ದಾಳಿ ಮಾಡಿದ್ದರು. ನಾರಾಯಣಗೌಡ ತನ್ನ ಕಾರಿನ ಮೂಲಕ ಹಣವನ್ನು ತಂದು ಹೋಟೆಲಿನಲ್ಲಿ ಸಂಗ್ರಹಿಸಿಟ್ಟಿದ್ದರು. ಈ ಹಣ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಅಲ್ಲದೆ ಹಣದ ಹಿಂದೆ ಸಚಿವರ ಪಾತ್ರವಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv