ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ 150+ ಸ್ಥಾನ ಗೆಲ್ಲುವ ಗುರಿಯನ್ನು ಹಾಕಿರುವ ಬಿಜೆಪಿಗೆ ಜನಾರ್ದನ ರೆಡ್ಡಿ(Janardhan Reddy) ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ(KRPP) ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆ ಏಳಲು ಕಾರಣ 2013ರ ಚುನಾವಣಾ ಫಲಿತಾಂಶ. 2013ರ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ(BS Yediyurappa) ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಮಾಡಿದ್ದರೆ ಶ್ರೀರಾಮುಲು(B Sriramulu) ಬಡವರ ರೈತರ ಶ್ರಮಿಕರ ಕಾಂಗ್ರೆಸ್(BSRC) ಪಕ್ಷವನ್ನು ಸ್ಥಾಪಿಸಿದ್ದರು. ಈ ಎರಡು ಪಕ್ಷಗಳು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೂ ಬಿಜೆಪಿಯ ಮತವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದವು. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ
Advertisement
Advertisement
ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ 204 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 9.8% ಮತ ಪಡೆದು 6 ಸೀಟು ಗೆದ್ದು 35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿತ್ತು. ರಾಮುಲು ನೇತೃತ್ವದ ಬಿಎಸ್‌ಆರ್‌ಸಿ ಪಕ್ಷ 176 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 2.7% ಮತ ಪಡೆದು 4 ಸೀಟು ಗೆದ್ದು, 5ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಅಡ್ಡಿ ಆಗಿತ್ತು.
Advertisement
2008ರ ಚುನಾವಣೆಯಲ್ಲಿ 33.9% ಮತ ಪಡೆದು 110 ಸ್ಥಾನ ಪಡೆದಿದ್ದ ಬಿಜೆಪಿ 2013ರ ಚುನಾವಣೆಯಲ್ಲಿ 19.9% ಮತ ಪಡೆದು ಕೇವಲ 40 ಸ್ಥಾನ ಮಾತ್ರ ಗೆದ್ದಿತ್ತು. ಮಧ್ಯ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಗೆ ಈ ಎರಡು ಪಕ್ಷಗಳು ಕಾರಣ ಎಂಬ ವಿಶ್ಲೇಷಣೆ ಬಂದಿತ್ತು.
Advertisement
2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಮರಳಿ ಪಕ್ಷ ಸೇರಿದ್ದರಿಂದ ಬಿಜೆಪಿ 43.4% ಮತ ಪಡೆದು 17 ಸ್ಥಾನವನ್ನು ಗೆದ್ದುಕೊಂಡಿತ್ತು. ಯಡಿಯೂರಪ್ಪ ಶಿವಮೊಗ್ಗದಿಂದ ಆಯ್ಕೆ ಆಗಿದ್ದರೆ ಬಳ್ಳಾರಿಯಿಂದ ಶ್ರೀರಾಮುಲು ಗೆದ್ದಿದ್ದರು. ಇದನ್ನೂ ಓದಿ: ನಾನು ಕಷ್ಟದಲ್ಲಿ ಇದ್ದಾಗ ಬಿಎಸ್‌ವೈ, ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ: ಜನಾರ್ದನ ರೆಡ್ಡಿ
2018ರ ವಿಧಾನಸಭೆ ವೇಳೆ ಬಿಜೆಪಿ 36.2% ಮತ ಪಡೆದು 104 ಸ್ಥಾನ ಗೆದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 51% ಮತ ಪಡೆದು ಒಟ್ಟು 28 ಸ್ಥಾನಗಳ ಪೈಕಿ 25 ಸ್ಥಾನವನ್ನು ಗೆದ್ದುಕೊಂಡಿತ್ತು.