ಮಂಡ್ಯ: ಕರ್ನಾಟಕದ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಸಾಧ್ಯ. ದೇಶ ವಿರೋಧಿ ಕಾಂಗ್ರೆಸ್ಸಿಗರನ್ನು (Congress) ಮನೆಯಲ್ಲೇ ಕೂರಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು ಹೇಳಿದರು.
ನಗರದ ಕೆ.ಆರ್.ಪುರದಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮಾನಸಿಕವಾಗಿ ದಿವಾಳಿ ಆಗಿದ್ದಾರೆ. ಒಡೆದು ಆಳುವ ನೀತಿಯ ಕಾಂಗ್ರೆಸ್ ಮುಖಂಡರನ್ನು ಸೋಲಿಸಿ ಮನೆಯಲ್ಲೇ ಕೂರಿಸಿ ಎಂದು ಕರೆ ನೀಡಿದರು.
Advertisement
ದೇಶದ 2ನೇ ದೊಡ್ಡ ಅರ್ಥ ವ್ಯವಸ್ಥೆಯಾಗಿ ಕರ್ನಾಟಕ ಹೊರಹೊಮ್ಮಿದೆ. ರೈತ ವಿದ್ಯಾನಿಧಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ರೈತರಿಗೆ ಸಾಲ, ಮೀಸಲಾತಿ ಹೆಚ್ಚಳ ಸೇರಿ ಸಮಗ್ರ ಅಭಿವೃದ್ಧಿಯ ಕಾರ್ಯವನ್ನು ಗಮನದಲ್ಲಿಟ್ಟು ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಬಲೂನು ಪತ್ತೆ – ಆತಂಕದಲ್ಲಿ ಜನ
Advertisement
Advertisement
ಪ್ರಧಾನಿಯವರು ಬಡವರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನರಿಗೆ ನೆರವಾಗಿದ್ದಾರೆ. ಉಜ್ವಲ, ಉಜಲಾ, ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಮತ್ತಿತರ ಯೋಜನೆಗಳಿಂದ ಜನಸಾಮಾನ್ಯರಿಗೆ ಪ್ರಯೋಜನ ಸಿಕ್ಕಿದೆ ಎಂದ ಅವರು, ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ, ಒಡೆದು ಆಳುವ ನೀತಿ, ಕಮಿಷನ್, ಜಾತಿ ರಾಜಕೀಯ ಮತ್ತು ಕುಟುಂಬ ರಾಜಕೀಯದ ಪಕ್ಷಗಳಿವು ಎಂದು ಟೀಕಿಸಿದರು.
Advertisement
ಕಾಂಗ್ರೆಸ್ ನಾಯಕರು ಜಾಮೀನಿನಲ್ಲಿದ್ದಾರೆ. ಜೆಡಿಎಸ್ (JDS) ಕೂಡ ಭ್ರಷ್ಟರ ಪಕ್ಷ. ಇವು ಭಾಯಿ ಭಾಯಿ ಪಕ್ಷಗಳು ಎಂದರಲ್ಲದೆ, ಜೆಡಿಎಸ್‍ಗೆ ಮತ ಕೊಟ್ಟರೆ ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ ಎಂದು ಎಚ್ಚರಿಸಿದರು. ಪಿಎಫ್‍ಐ ನಾಯಕರನ್ನು ಕಾಂಗ್ರೆಸ್ ಬೆಂಬಲಿಸಿ ಅವರ ಕೇಸುಗಳನ್ನು ರದ್ದು ಮಾಡಿತ್ತು. ಆದರೆ, ಬಿಜೆಪಿ ಪಿಎಫ್‍ಐ ನಿಷೇಧಿಸಿದೆ ಎಂದು ವಿವರಿಸಿದರು.
ದೇಶದ ಸುರಕ್ಷತೆಗಾಗಿ ಮೋದಿಜಿ, ಯಡಿಯೂರಪ್ಪ- ಬೊಮ್ಮಾಯಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ಕೊಟ್ಟಿದ್ದಾರೆ ಎಂದರಲ್ಲದೆ, ಬೈರತಿ ಬಸವರಾಜ್ ಅವರನ್ನೂ ಅಭಿನಂದಿಸಿದರು.
ಕೋವಿಡ್ ಕಾಲದಲ್ಲಿ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅನೇಕ ದೇಶಗಳು ಸಂಕಷ್ಟದಲ್ಲಿ ಸಿಲುಕಿದವು. ಆದರೆ, ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ಆರ್ಥಿಕ ಕ್ಷೇತ್ರ ಮತ್ತು ಅಭಿವೃದ್ಧಿಯಲ್ಲಿ ಸಾಧನೆ ಮಾಡಿದೆ. ಮೋದಿಜಿ ಅವರನ್ನು ವಿರೋಧಿಸುವ ಚಿಂತನೆಯೊಂದಿಗೆ ಕಾಂಗ್ರೆಸ್ಸಿಗರು ದೇಶ ವಿರೋಧಿಗಳಾಗಿದ್ದಾರೆ ಎಂದು ಟೀಕಿಸಿದರು.
ರಷ್ಯಾ, ಇಟೆಲಿ, ಬ್ರಿಟನ್ ಸೇರಿ ಇತರೆಡೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಆದರೆ, ಭಾರತದಲ್ಲಿ ಅದು ಕನಿಷ್ಠ ಮಟ್ಟದಲ್ಲಿದೆ. ಭಾರತವು ವಿಶ್ವದಲ್ಲೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಗರಿಷ್ಠ ಬೆಳವಣಿಗೆ ಸಾಧಿಸುವ ನಗರವಾಗಿ ಹೊರಹೊಮ್ಮಿದೆ ಎಂದು ಪ್ರಶಂಸಿಸಿದರು.
2014ರಲ್ಲಿ ಭಾರತವು ಗರಿಷ್ಠ ಮೊಬೈಲ್‍ಗಳನ್ನು ವಿದೇಶದಿಂದ ಖರೀದಿಸುತ್ತಿತ್ತು. ಈಗ ಶೇ.97ರಷ್ಟು ಮೊಬೈಲ್‍ಗಳನ್ನು ಆಂತರಿಕವಾಗಿ ಉತ್ಪಾದಿಸುತ್ತಿದೆ. ಡಿಜಿಟಲ್ ವ್ಯವಹಾರವೂ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕದಲ್ಲಿ 11 ವಿಮಾನನಿಲ್ದಾಣಗಳು ನಿರ್ಮಾಣವಾಗುತ್ತಿವೆ. 9 ವರ್ಷಗಳಲ್ಲಿ 74 ವಿಮಾನನಿಲ್ದಾಣಗಳು ನಿರ್ಮಾಣವಾಗಿದೆ ಎಂದರು.
ರೈಲ್ವೆ ಬಜೆಟ್ ಮೊತ್ತ ಗಮನಾರ್ಹವಾಗಿ ಹೆಚ್ಚಾಗಿದೆ. ಹೈವೇ ನಿರ್ಮಾಣದ ವೇಗವೂ ಹೆಚ್ಚಾಗಿದೆ. ಅಭಿವೃದ್ಧಿಯ ವೇಗ ಹೆಚ್ಚಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಧಾನಿಯವರು ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟಿಸಿದ್ದಾರೆ. 2 ಹೊಸ ರೈಲ್ವೆ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬೆಳಗಾವಿಯಲ್ಲೂ 2,700 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ ಎಂದು ವಿವರಿಸಿದರು.ʼ
ಬೆಂಗಳೂರಿಗೆ ದೇಶ ಮತ್ತು ವಿಶ್ವದಲ್ಲಿ ವಿಶೇಷ ಸ್ಥಾನಮಾನ ಇದೆ. ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡರ ನಾಡಿದು. ಸ್ಟಾರ್ಟಪ್, ತಂತ್ರಜ್ಞಾನದಲ್ಲಿ ಬೆಂಗಳೂರಿಗೆ ದೊಡ್ಡ ಹೆಸರಿದೆ ಎಂದು ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯ. ಮತ್ತೆ ಕರ್ನಾಟಕದಲ್ಲಿ ಕಮಲ ಅರಳುವ ಭರವಸೆ ಮೂಡಿದೆ. ಕೆಂಪೇಗೌಡ ವಿಮಾನನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ, ಎಚ್‍ಎಎಲ್ ಫ್ಯಾಕ್ಟರಿಯ ಕಾಮಗಾರಿ ಉದ್ಘಾಟನೆ ಮಾಡಿದ್ದನ್ನು ಅವರು ಜನರ ಮುಂದಿಟ್ಟರು. ಮೈಸೂರು- ಚೆನ್ನೈ ವಂದೇ ಭಾರತ್ ಟ್ರೈನ್ ಆರಂಭ, ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಮಾಡಿದ್ದನ್ನು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಭಾನುವಾರ ಏನೇನು ಕಾರ್ಯಕ್ರಮ?
ರಾಜ್ಯದ ಸಚಿವ ಆರ್.ಅಶೋಕ್ ಅವರು ಮಾತನಾಡಿ ಬಿಜೆಪಿಗೆ ಮತ ಕೊಡಲು ವಿನಂತಿಸಿದರು. ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಮಾತನಾಡಿ, ಗರಿಷ್ಠ ಸುಳ್ಳು ಹೇಳುವವರು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು. ತಮಿಳುನಾಡಿನಲ್ಲೂ ಇದೇ ಮಾದರಿಯ ಸುಳ್ಳು ಆಶ್ವಾಸನೆ ಕೊಟ್ಟಿದ್ದು, ಅವನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಆಕ್ಷೇಪಿಸಿದರು. ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರಾಜ್ಯದ ಸಚಿವ ಬೈರತಿ ಬಸವರಾಜ್ ಅವರು ಮಾತನಾಡಿ, ಬಿಜೆಪಿ ಗರಿಷ್ಠ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. 2023ರ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು. ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರಕಾರ 9 ಸಾವಿರ ಕೋಟಿ ನೀಡಿದೆ. ನಮ್ಮದು ಅಭಿವೃದ್ಧಿಯ ಸಂಕಲ್ಪ ಎಂದು ತಿಳಿಸಿದರು. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು ತಂದುಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.
ರಾಜ್ಯದ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮುನಿರತ್ನ, ಪಕ್ಷದ ಸಚಿವರು, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮುಖಂಡ ಸಚ್ಚಿದಾನಂದ ಮೂರ್ತಿ, ಜಿಲ್ಲಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.